ನ್ಯಾ.ಲೋಯಾ ಪ್ರಕರಣಕ್ಕೆ ಸಂಬಂಧಿಸಿ ಅರ್ಜಿ ಸಲ್ಲಿಸಿದ್ದ ವಕೀಲ 17 ವರ್ಷಗಳ ಹಿಂದಿನ ಪ್ರಕರಣದಲ್ಲಿ ಬಂಧನ

Update: 2018-08-04 17:53 GMT

ಮುಂಬೈ,ಆ.4: ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ನ್ಯಾಯಾಧೀಶ ಬಿ.ಎಚ್. ಲೋಯಾ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಬಾಂಬೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ ವಕೀಲ ಹಾಗು ಸಾಮಾಜಿಕ ಕಾರ್ಯಕರ್ತರೊಬ್ಬರನ್ನು 17 ವರ್ಷಗಳ ಹಿಂದಿನ ಪ್ರಕರಣದ ಹೆಸರಿನಲ್ಲಿ ಬಂಧಿಸಲಾಗಿದೆ.

ಕೋ ಆಪರೇಟಿವ್ ಹೌಸಿಂಗ್ ಸೊಸೈಟಿಯಿಂದ ಭೂಮಿ ಖರೀದಿಸಲು ವಕೀಲ, ಸಾಮಾಜಿಕ ಕಾರ್ಯಕರ್ತ ಸತೀಶ್ ಉಕೆ ನಕಲಿ ದಾಖಲೆಗಳನ್ನು ಸಲ್ಲಿಸಿದ್ದರು ಎಂದು ಆರೋಪಿಸಲಾಗಿದೆ. ಆದರೆ ನ್ಯಾ. ಲೋಯಾ ಪ್ರಕರಣಕ್ಕೆ ಸಂಬಂಧಿಸಿ ಹೋರಾಟ ನಡೆಸುತ್ತಿದ್ದುದಕ್ಕಾಗಿ ವಂಚನೆ ಪ್ರಕರಣ ಬಳಸಿ ಅವರನ್ನು ಬಂಧಿಸಲಾಗಿದೆ ಎಂದು ಉಕೆಯವರ ಸಹೋದರ ಪ್ರದೀಪ್ ಹೇಳಿದ್ದಾರೆ. ಲೋಯಾ ಪ್ರಕರಣಕ್ಕೆ ಸಂಬಂಧಿಸಿ ಸತೀಶ್ ಉಕೆ ವಿಶೇಷ ಮುತುವರ್ಜಿ ವಹಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಹಾಗು ಮಾಹಿತಿಗಳನ್ನು ಅವರು ಕಲೆ ಹಾಕುತ್ತಿದ್ದರು.

ಕಪಿಲ್ ಸಿಬಲ್ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲೂ ಉಕೆ ಭಾಗವಹಿಸಿದ್ದರು. ಸಾವನ್ನಪ್ಪುವ 2 ತಿಂಗಳ ಮೊದಲು ಅಂದರೆ 2014ರ ಅಕ್ಟೋಬರ್ ನಲ್ಲಿ ಸತೀಶ್ ಉಕೆ ಜೊತೆ ಮಾತನಾಡಿದ್ದ ನ್ಯಾ.ಲೋಯಾ ಸೊಹ್ರಾಬುದ್ದೀನ್ ಪ್ರಕರಣಕ್ಕೆ ಸಂಬಂಧಿಸಿ ತನಗೆ ತೀವ್ರ ಒತ್ತಡವಿದೆ ಎಂದು ಹೇಳಿದ್ದರು ಎಂದು ಸಿಬಲ್ ವಿವರಿಸಿದ್ದರು.

ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ 2009ರ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂದರ್ಭ ಕೆಲವು ಮಾಹಿತಿಗಳನ್ನು ಬಚ್ಚಿಟ್ಟಿದ್ದರು. ಆದ್ದರಿಂದ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕು ಎಂದೂ ಸತೀಶ್ ಉಕೆ ಅರ್ಜಿ ಸಲ್ಲಿಸಿದ್ದರು.

ಸತೀಶ್  ಸೇರಿದಂತೆ ಅವರ ಹಿರಿಯ ಸಹೋದರ ಪ್ರದೀಪ್ ಹಾಗೂ ಮತ್ತೊಬ್ಬ ವ್ಯಕ್ತಿ ಚಂದ್ರಶೇಖರ್ ಮಾತೆ ವಿರುದ್ಧ ನಕಲಿ ಪತ್ರ ತಯಾರಿಕೆ, ಮೋಸ ಹಾಗೂ ಕ್ರಿಮಿನಲ್ ಒಳಸಂಚು ಆರೋಪದಡಿ ಐಪಿಸಿಯ ಜಾಮೀನು ದೊರಕದ ಸೆಕ್ಷನ್‌ನಡಿ ಇದೀಗ ಪ್ರಕರಣ  ದಾಖಲಿಸಲಾಗಿದೆ.

ಸತೀಶ್ ಕಳೆದ ಎರಡು ದಶಕಗಳಿಂದ ನಾಗಪುರದಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದರೆ ಅವರ ಸಹೋದರ ಪ್ರದೀಪ್ ಪೊಲೀಸ್ ಇಲಾಖೆಯಿಂದ ಅಮಾನತುಗೊಂಡಿದ್ದರು. ಸಿವಿಲ್ ವ್ಯಾಜ್ಯದ ಪ್ರಕರಣಕ್ಕೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವುದು ಹಾಗೂ ಸ್ಥಳೀಯ ಪೊಲೀಸರ ಬದಲು ಆರ್ಥಿಕ ಅಪರಾಧ ಪತ್ತೆದಳಕ್ಕೆ ಪ್ರಕರಣದ ತನಿಖೆಯನ್ನು ವಹಿಸಿ ಕೊಟ್ಟಿರುವುದು ಪ್ರಶ್ನಾರ್ಹವಾಗಿದೆ ಎಂಬ ಟೀಕೆ ವ್ಯಕ್ತವಾಗಿದೆ. ಆದರೆ ಈ ಪ್ರಕರಣದಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಫಡ್ನವೀಸ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯನ್ನು ಮ್ಯಾಜಿಸ್ಟ್ರೇಟ್ 2014ರಲ್ಲಿ ತಿರಸ್ಕರಿಸಿದಾಗ ಸತೀಶ್ ಮೇಲಿನ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಫಡ್ನವೀಸ್‌ಗೆ ನೋಟಿಸ್ ಜಾರಿಗೊಳಿಸಿದೆ. ಆದರೆ ನೋಟಿಸ್ ತಲುಪುವ ಮುನ್ನವೇ ಸತೀಶ್‌ರನ್ನು ಬಂಧಿಸಲಾಗಿದೆ. ಐಶ್ವರ್ಯ ಸಹಕಾರಿ ಗೃಹ ನಿರ್ಮಾಣ ಸಂಸ್ಥೆಗೆ ಸೇರಿದ ಜಮೀನಿನ ನಕಲಿ ದಾಖಲೆ ಪತ್ರವನ್ನು ಸತೀಶ್ ಹಾಗೂ ಅವರ ಸಹೋದರ ಸಿದ್ಧಪಡಿಸಿದ್ದಾರೆ. ಸುಮಾರು 5 ಕೋಟಿ ರೂ. ವೌಲ್ಯದ 1.5 ಎಕರೆ ಜಮೀನನ್ನು ಮೂವರು ಆರೋಪಿಗಳು ಅಕ್ರಮವಾಗಿ ಸ್ವಾಧೀನ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ದೂರಿನ ಹಿನ್ನೆಲೆಯಲ್ಲಿ ಈ ಬಂಧನವಾಗಿದೆ ಎಂದು ಪೊಲೀಸ್ ಅಧಿಕಾರಿ ಲಲಿತ್ ವಾರ್ತಿಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News