×
Ad

ಬಿಜೆಪಿ ಸೋಲಿಸಲು ಮೀಸಲಾತಿ ಬದಲಾವಣೆಯ ಷಡ್ಯಂತ್ರ: ಮಟ್ಟಾರು ರತ್ನಾಕರ

Update: 2018-08-04 22:35 IST

ಉಡುಪಿ, ಆ.4: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿ ರಾಜ್ಯ ಸರಕಾರ ಮೀಸಲಾತಿಯನ್ನು ಬದಲಾಯಿಸುವ ಮೂಲಕ ಬಿಜೆಪಿಯನ್ನು ಸೋಲಿಸುವ ಷಡ್ಯಂತ್ರ ನಡೆಸುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆಆರೋಪಿಸಿದ್ದಾರೆ.

ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಉಡುಪಿ ನಗರಸಭೆ, ಕುಂದಾಪುರ ಮತ್ತು ಕಾರ್ಕಳ ಪುರಸಭೆ, ಸಾಲಿಗ್ರಾಮ ಪಟ್ಟಣ ಪಂಚಾಯತ್‌ಗಳಲ್ಲಿ ಬಿಜೆಪಿಗೆ ಗೆಲುವು ಸಾಧಿಸಲಿದೆ. ಜನ ಕಾಂಗ್ರೆಸ್ ಆಳ್ವಿಕೆಯಿಂದ ಬೇಸತ್ತಿದ್ದಾರೆ ಎಂದರು.

ಈಗಾಗಲೇ ಬಿಜೆಪಿಯಿಂದ ಚುನಾವಣಾ ಸಮಿತಿ ರಚಿಸಲಾಗಿದ್ದು, ಶಾಸಕರ ನೇತೃತ್ವದಲ್ಲಿ ಚುನಾವಣಾ ನಿರ್ವಹಣಾ ಉಸ್ತುವಾರಿಗಳನ್ನು ನೇಮಕ ಮಾಡ ಲಾಗಿದೆ. ಕುಂದಾಪುರ ಹಾಗೂ ಸಾಲಿಗ್ರಾಮಕ್ಕೆ ಕುತ್ಯಾರು ನವೀನ್ ಶೆಟ್ಟಿ, ಕಾರ್ಕಳಕ್ಕೆ ಕುಯಿಲಾಡಿ ಸುರೇಶ್ ನಾಯಕ್, ಉಡುಪಿಗೆ ಮಟ್ಟಾರು ರತ್ನಾಕರ ಹೆಗ್ಡೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು.

ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಉಡುಪಿ ನಗರಸಭೆ ಯಲ್ಲಿ ಬಿಜೆಪಿಯ ಪ್ರಭಾವಿ ಅಭ್ಯರ್ಥಿಗಳು ಚುನಾವಣೆಗೆ ನಿಲ್ಲದ ರೀತಿಯಲ್ಲಿ ಮೀಸಲಾತಿ ಪಟ್ಟಿ ತಯಾರಿಸಲಾಗಿದೆ. ಇದನ್ನು ಸವಾಲಾಗಿ ಸ್ವೀಕರಿಸಿ ಉಡುಪಿ ನಗರಸಭೆಯಲ್ಲಿ 35 ವಾರ್ಡ್‌ಗಳಲ್ಲಿಯೂ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲುವು ಸಾಧಿಸಲಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ದಿನಕರ ಶೆಟ್ಟಿ ಹೆರ್ಗ, ಯಶ್ ಪಾಲ್ ಸುವರ್ಣ, ಮಹೇಶ್ ಠಾಕೂರ್, ಕಪ್ಪೆಟ್ಟು ಪ್ರವೀಣ್ ಶೆಟ್ಟಿ, ಪ್ರಭಾಕರ ಪೂಜಾರಿ, ರವಿ ಅಮೀನ್, ರಶ್ಮಿತಾ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News