×
Ad

ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಿಮಿನಲ್ ಪ್ರಕರಣಕ್ಕೆ ಸಚಿವ ಖಾದರ್ ಸೂಚನೆ

Update: 2018-08-04 22:48 IST

ಮಂಗಳೂರು, ಆ.4: ಯೆಯ್ಯಡಿ ಮೇರಿಹಿಲ್‌ನ ಕಾರಂತ ಬಡಾವಣೆಯಲ್ಲಿ 2008ರಲ್ಲಿ ಮೂಡದಿಂದ ಲೇಔಟ್ ಆಗಿರುವ ಜಾಗ ಸದ್ಯ ಕಾಣುತ್ತಿಲ್ಲ. ನಿವೇಶನ ದೊರಕಿದಾಗ ಜಾಗವನ್ನು ನೋಡಿದ್ದೆ. ಆದರೆ ಅಲ್ಲಿ ಆ ಜಾಗ ನಿಮ್ಮ ಹೆಸರಿನಲ್ಲಿ ಇಲ್ಲ ಎನ್ನುತ್ತಿದ್ದಾರೆ ಎಂದು ಶಕುಂತಳಾ ಎಂಬ ಮಹಿಳೆಯೊಬ್ಬರು ಮೂಡ ಅದಾಲತ್‌ನಲ್ಲಿ ಅಳಲು ತೋಡಿಕೊಂಡರು.

ಅದಾಲತ್‌ನ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಯು.ಟಿ.ಖಾದರ್, ಅಧಿಕಾರಿಗಳನ್ನು ಈ ಬಗ್ಗೆ ಪ್ರಶ್ನಿಸಿದರು.

ಸರಕಾರಿ ಜಾಗವೇ ಮಾಯವಾದರೆ ಜನರ ಗತಿಯೇನು ಎಂದು ಅಧಿಕಾರಿಗಳನ್ನು ತರಾಟೆಗೈದ ಸಚಿವ ಖಾದರ್, ಈ ಪ್ರಕರಣದ ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೂಚಿಸಿದರು. ಮಾತ್ರವಲ್ಲದೆ, ಮಹಿಳೆಗೆ ಪರ್ಯಾಯ ನಿವೇಶನವನ್ನು ಒದಗಿಸುವಂತೆಯೂ ಸಲಹೆ ನೀಡಿದರು.

‘‘ಪತಿಯೊಂದಿಗೆ ಬೆಂಗಳೂರಿನಲ್ಲಿದ್ದ ವೇಳೆ 12 ವರ್ಷಗಳ ಹಿಂದೆ 2 ಲಕ್ಷ ರೂ. ಕೊಟ್ಟು ಇಲ್ಲಿ ಜಾಗ ಪಡೆದಿದ್ದೆವು. ಅಧಿಕಾರಿಗಳು ಜಾಗವನ್ನೂ ತೋರಿಸಿದ್ದರು. ಆದರೆ ಮೂರು ತಿಂಗಳ ಹಿಂದೆ ನನ್ನ ಪತಿ ನಿಧನರಾದ ಬಳಿಕ ನಾನು ಮನೆ ಕಟ್ಟಲು ಬ್ಯಾಂಕ್ ಸಾಲ ಪಡೆಯಲು ಮುಂದಾದಾಗ ಸರ್ವೆಗೆ ತೆರಳಿದಾಗ ಅಲ್ಲಿ ಜಾಗವೇ ಇಲ್ಲ ಎಂಬ ಉತ್ತರ ಬಂತು. ಇದಕ್ಕಾಗಿ ಕಳೆದ ಮೂರು ತಿಂಗಳಲ್ಲಿ 10 ಬಾರಿ ಬೆಂಗಳೂರಿನಿಂದ ಇಲ್ಲಿಗೆ ಬಂದು ಹೋಗಿದ್ದೇನೆ’’ ಎಂದು ಮಹಿಳೆ ಮಾಹಿತಿ ನೀಡಿದರು.

ಮಧ್ಯವರ್ತಿಗಳಿಗೆ ಪ್ರವೇಶ ನೀಡಬೇಡಿ

ನನ್ನ ಮನೆಯ ಏಕನಿವೇಶನಕ್ಕಾಗಿ ಮುಂದಾದಾಗ ಏಜೆಂಟರೊಬ್ಬರು 35,000 ರೂ. ನೀಡಿದರೆ ಮಾಡಿಸುವುದಾಗಿ ಹೇಳಿದ್ದರು. ಬಳಿಕ 15,000 ರೂ.ಗಳಲ್ಲಿ ಮಾಡಿ ಕೊಡುವುದಾಗಿ ಒಪ್ಪಿದ್ದರು. ಆದರೆ ಬಳಿಕ ನಾನೇ ಬಂದು ಸರಕಾರಿ ಶುಲ್ಕ ಹೊರತುಪಡಿಸಿ ಯಾವುದೇ ಹೆಚ್ಚುವರಿ ಹಣವಿಲ್ಲದೆ ಏಕನಿವೇಶನವನ್ನು ಮಾಡಿಸಿಕೊಂಡೆ. ಹಾಗಾಗಿ ಮೊದಲು ಮೂಡ ಕಚೇರಿಯಲ್ಲಿ ಮಧ್ಯವರ್ತಿಗಳಿಗೆ ಪ್ರವೇಶ ಇಲ್ಲದಂತೆ ಮಾಡಬೇಕು. ಏಕನಿವೇಶನಕ್ಕೆ ತುಂಬಾ ಖರ್ಚಾಗುತ್ತದೆ ಎಂದು ಹೇಳಿ ಜನರನ್ನು ವಂಚಿಸುವ ಕೆಲಸ ನಡೆಯುತ್ತಿದೆ ಎಂದು ಆರ್ಥರ್ ಡಿಸೋಜಾ ಎಂಬವರು ಅಹವಾಲು ಸಲ್ಲಿಸಿದರು.

10 ಸೆಂಟ್ಸ್‌ವರೆಗೆ ಕೆರೆ ಬಾವಿ ಅಭಿವೃದ್ಧಿ ಶುಲ್ಕ ಹಾಕುವುದು ಬೇಡ

ಮೂಡದಲ್ಲಿ ಏಕನಿವೇಶನದ ಸಂದರ್ಭ ಕೆರೆ ಬಾವಿ ಅಭಿವೃದ್ಧಿ ಶುಲ್ಕವಾಗಿ ಸೆಂಟ್ಸ್‌ಗೆ 610 ರೂ.ನಂತೆ ಪಡೆಯಲಾಗುತ್ತದೆ. ಆ ಹಣ ಕೋಟಿಗಟ್ಟಲೆ ಸಂಗ್ರಹ ವಾಗಿದೆ. ಆದರೆ ಕೆರೆ ಬಾವಿಗಳು ಅಭಿವೃದ್ಧಿಯಾಗುತ್ತಿಲ್ಲ. ಆದ್ದರಿಂದ 10 ಸೆಂಟ್ಸ್‌ವರೆಗಿನ ಏಕನಿವೇಶನಕ್ಕೆ ಕೆರೆಬಾವಿ ಅಭಿವೃದ್ಧಿ ಶುಲ್ಕ ವಿಧಿಸಬಾರದು ಎಂದು ಹನುಮಂತ ಕಾಮತ್ ಒತ್ತಾಯಿಸಿದರು.

ಸಚಿವರು ಪ್ರತಿಕ್ರಿಯಿಸಿ ಇದನ್ನು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಜತೆಗಿನ ಸಭೆಯಲ್ಲಿ ಪರಿಗಣಿಸಲಾಗುವುದು ಎಂದರು.

ಹಳೆಯಂಗಡಿಯ ಸಾಹುಲ್ ಹಮೀದ್ ಎಂಬವರು, ಏಕ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ 5 ತಿಂಗಳಾದರೂ ಇತ್ಯರ್ಥವಾಗಿಲ್ಲ. ಇದಕ್ಕಾಗಿ ಬ್ರೋಕರೊಬ್ಬರು 65,000 ರೂ.ಗಳನ್ನು ಪಡೆದಿದ್ದಾರೆ ಎಂದು ದೂರಿದರೂ, ಸಚಿವರು ಬ್ರೋಕರ್ ಹೆಸರು ಹೇಳಲು ಸೂಚಿಸಿದಾಗ ಅವರು ಹೆಸರು ಬಹಿರಂಗ ಪಡಿಸಲು ಹಿಂದೇಟು ಹಾಕಿದು.

ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಕೆಲವೆಡೆ ಅನಗತ್ಯವಾಗಿ ರಸ್ತೆ ಅಗಲೀಕರಣಕ್ಕೆ ಮುಂದಾಗುವುದರಿಂದ 3ರಿಂದ 10 ಸೆಂಟ್ಸ್‌ವರೆಗೆ ಜಾಗ ಹೊಂದಿರುವ ಅನೇಕರು ತಮ್ಮ ಭೂಮಿಯಲ್ಲಿ ಬಹುಪಾಲನ್ನು ಕಳೆದುಕೊಳ್ಳುವ ಪರಿಸ್ಥಿತಿ ಇದೆ. ಹಳೆಯ ಮನೆಗಳಿದ್ದು ಹೊಸ ಮನೆಗಳನ್ನು ನಿರ್ಮಿಸುವಾಗ ಸೆಟ್‌ಬ್ಯಾಕ್, ರಸ್ತೆ ವಿಸ್ತರಣೆಯಿಂದಾಗಿ ತೊಂದರೆಯಾಗುತ್ತಿದೆ ಎಂದು ಯಶವಂತ ಬೋಳೂರು ಸುಲ್ತಾನ್ ಬತ್ತೇರಿಯಿಂದ ಕುದ್ರೋಳಿ ರಸ್ತೆಯ ಉದಾರಣೆಯೊಂದಿಗೆ ಅಹವಾಲು ಸಲ್ಲಿಸಿದರು.

ಮನೆಗಳೇ ರಸ್ತೆಗಳಿಗೆ ಹೋಗುವ ಸಂದರ್ಭ ಪುನರ್ವಸತಿ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸಲಹೆ ನೀಡಿದರೆ, ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುಂತೆ ಸಚಿವ ಖಾದರ್ ನಿರ್ದೇಶಿಸಿದರು.

ಮಾಸ್ಟರ್ ಪ್ಲಾನ್‌ಗಳು ಜನರಿಗೆ ಬದುಕಲು ಆಗಬೇಕೇ ಹೊರತು ಬಿಲ್ಡರ್‌ಗಳಿಗೆ ಪೂರಕ ಆಗಿರುವುದು ಬೇಡ ಎಂದು ಸಚಿರು ಅಧಿಕಾರಿಗಳನ್ನು ಎಚ್ಚರಿಸಿದರು.
ಕೊಂಚಾಡಿ ದೇರೆಬೈಲ್‌ನ ಪ್ರಶಾಂತಿ ನಗರ ಬಡಾವಣೆಯಲ್ಲಿ 120ಕ್ಕೂ ಅಧಿಕ ಮನೆಗಳಿವೆ. ಅಲ್ಲಿಗೆ ಆಟದ ಮೈದಾನ, ಉದ್ಯಾನವನವನ್ನು ಅಭಿವೃದ್ಧಿ ಪಡಿಸುವುದಾಗಿ ಹೇಳಿದ್ದರೂ ಅಲ್ಲಿ ಉದ್ಯಾನವನದ ನಡುವೆ ರಸ್ತೆ ಮಾಡಲಾಗಿದೆ ಎಂದು ಅಲ್ಲಿನ ನಿವಾಸಿಗಳು ಅದಾಲತ್‌ನಲ್ಲಿ ಅಹವಾಲು ಸಲ್ಲಿಸಿದರು.

ಆ.7ರಂದು ಬೆಳಗ್ಗೆ ಅಲ್ಲಿಗೆ ಜನಪ್ರತಿನಿಧಿಗಳುಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸರ್ವೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವ ಖಾದರ್ ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಶಾಸಕರಾದ ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಮೂಡಾ ಆಯುಕ್ತ ಶ್ರೀಕಾಂತ್ ರಾವ್, ಮನಪಾ ಆಯುಕ್ತ ಮುಹಮ್ಮದ್ ನಝೀರ್ ಹಾಗೂ ಮನಪಾ ಹಾಗೂ ಮೂಡಾ ಅಧಿಕಾರಿಗಳು ಉಪಸ್ಥಿತರಿದ್ದರು.

ಮಧ್ಯವರ್ತಿಗಳು, ಬ್ರೋಕರ್‌ಗಳಿಗೆ ಅವಕಾಶ ನೀಡಬೇಡಿ

ಅದಾಲತ್‌ನಲ್ಲಿ ಅಹವಾಲು ಸಲ್ಲಿಸಿದ ವ್ಯಕ್ತಿಯೊಬ್ಬರು, ತಾನು ಮೂರು ಹಂತದಲ್ಲಿ ಒಟ್ಟು 43 ಸೆಂಟ್ಸ್ ಜಾಗ ಖರೀದಿಸಿ ಸೇನೆಯವರಿಗೆ ಕಟ್ಟಡ ನಿರ್ಮಾಣ ಮಾಡಿ ನೀಡಿದ್ದೇನೆ. ಆದರೆ ಅಂತಿಮವಾಗಿ ಏಕನಿವೇಶನದ ವೇಳೆ ಮೂಡ ಅಧಿಕಾರಿಗಳು ಒಂದು ಲಕ್ಷ ರೂ. ಬೇಡಿಕೆ ಇರಿಸಿದ್ದರು. ಅದನ್ನು ನೀಡದಕ್ಕಾಗಿ ನಿವೇಶನ ಪತ್ರದಲ್ಲಿ ತೊಂದರೆ ನೀಡಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭ ಅಧಿಕಾರಿಗಳನ್ನು ಗದರಿದ ಸಚಿವರು, ಇಂತಹ ಆರೋಪಗಳಿಗಾಗಿಯೇ ಈ ಅದಾಲತ್ ಮಾಡಿ ಜನರ ಸಮಸ್ಯೆಗಳನ್ನು ತಿಳಿಯುವ ಪ್ರಯತ್ನ ಮಾಡಲಾಗಿದೆ. ಇನ್ನು ಮುಂದೆ ಇಂತಹ ಆರೋಪಗಳು ಬಾರದಂತೆ ಎಚ್ಚರಿಕೆ ವಹಿಸಬೇಕು. ಜನರಿಗೆ ತೊಂದರೆ ಆಗದಂತೆ ಕೆಲಸ ನಿರ್ವಹಿಸಬೇಕು. ಮಾತ್ರವಲ್ಲದೆ ಮಧ್ಯವರ್ತಿಗಳಿಗೆ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News