ಸೆಪ್ಟಂಬರ್‌ನಿಂದ ‘ಜನಸಾಮಾನ್ಯರ ಬಳಿಗೆ ಮೂಡಾ’ ಹೋಬಳಿ ಮಟ್ಟದಲ್ಲಿ ಮೂಡಾ ಅದಾಲತ್

Update: 2018-08-04 17:25 GMT

ಮಂಗಳೂರು, ಆ.3: ನಗರಾಭಿವೃದ್ಧಿ ಪ್ರಾಧಿಕಾರದಿಂದ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ, ಮಧ್ಯವರ್ತಿಗಳ ತೊಂದರೆ ಆಗುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಸೆಪ್ಟಂಬರ್ ತಿಂಗಳಿನಿಂದ ಪ್ರತಿ ಶನಿವಾರ ‘ಜನ ಸಾಮಾನ್ಯರ ಬಳಿಗೆ ಮೂಡಾ’ ಎಂಬ ನೆಲೆಯಲ್ಲಿ ಹೋಬಳಿ ಮಟ್ಟದಲ್ಲಿ ಮೂಡಾ ಅಧಿಕಾರಿಗಳು ಸ್ಥಳದಲ್ಲೇ ಅರ್ಜಿ ಸ್ವೀಕರಿಸಿ, ಮೂರು ದಿನಗಳ ಒಳಗೆ ಅರ್ಜಿದಾರರಿಗೆ ಏಕನಿವೇಶನ ಪರವಾನಿಗೆ ಪತ್ರವನ್ನು ನೀಡಲು ಕ್ರಮ ವಹಿಸಲಾಗುವುದು ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಯು.ಟಿ.ಖಾದರ್ ತಿಳಿಸಿದ್ದಾರೆ.

ಮೂಡಾ ಕಚೇರಿಯಲ್ಲಿಂದು ಅದಾಲತ್ ಹಾಗೂ ಅಹವಾಲು ಸ್ವೀಕಾರ ಸಭೆಯ ಬಳಿಕ ಸುದ್ದಿಗಾರರ ಜತೆ ವಾತನಾಡಿ ಅವರು ಈ ವಿಷಯ ತಿಳಿಸಿದರು.
ಮೂಡಾದಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಡೆಯಲು ಆನ್‌ಲೈನ್ ಅರ್ಜಿ ಸ್ವೀಕಾರ ಮಾತ್ರವೇ ಪರಿಹಾರ. ಈ ಆನ್‌ಲೈನ್ ಪ್ರಕ್ರಿಯೆ ಸದ್ಯದಲ್ಲೇ ಆರಂಭವಾಗಲಿದೆ. ಈ ನಡುವೆ ಬಜ್ಪೆ, ಮುಲ್ಕಿ, ಸುರತ್ಕಲ್ ಹಾಗೂ ಉಳ್ಳಾಲದಲ್ಲಿ ಪ್ರತಿ ಶನಿವಾರದಂದು (ತಿಂಗಳ ನಾಲ್ಕು ಶನಿವಾರ ತಲಾ ಒಂದೊಂದು ಹೋಬಳಿಯಂತೆ) ಮೂಡಾ ಅಧಿಕಾರಿಗಳ ತಂಡ ತೆರಳಿ ಸ್ಥಳದಲ್ಲೇ ಅರ್ಜಿಯನ್ನು ಪಡೆಯಲಿದೆ. ಬಳಿಕ ಸಮೀಕ್ಷೆ ನಡೆಸಿ, ಶುಲ್ಕ ಪಡೆದು ಮೂರು ದಿನಗಳಲ್ಲಿ ಏಕ ನಿವೇಶನ ಪತ್ರವನ್ನು ನೀಡಲಿದೆ. ಈ ಕಾರ್ಯ ಮೂಡಾ ಆಯುಕ್ತರ ನೇತೃತ್ವದಲ್ಲಿ ನಡೆಯಲಿದೆ. ಆರು ತಿಂಗಳಿಗೊಮ್ಮೆ ಮೂಡಾ ಕಚೇರಿಯಲ್ಲಿ ಅದಾಲತ್ ನಡೆಯಲಿದೆ ಎಂದು ಸಚಿವ ಖಾದರ್ ತಿಳಿಸಿದರು.

ಇಂದು ನಡೆದ ಅದಾಲತ್‌ನಲ್ಲಿ ಸ್ವೀಕರಿಸಲಾದ 116 ಪ್ರಕರಣಗಳಲ್ಲಿ 77 ಪ್ರಕರಣಗಳನ್ನು ಪರಿಶೀಲಿಸಲಾಗಿದೆ. 40ಕ್ಕೂ ಅಧಿಕ ಪ್ರಕರಣಗಳನ್ನು ಕಾಲ ಮಿತಿಯೊಳಗೆ ಪರಿಹರಿಸಲು ಸೂಚಿಸಲಾಗಿದೆ. ಕೆಲವೊಂದು ಪ್ರಕರಣಗಳಲ್ಲಿ ಅರ್ಜಿದಾರರಿಂದಲೇ ನಿಯಮ ಉಲ್ಲಂಘನೆ ಆಗಿರುವುದು ಕಂಡು ಬಂದಿರುವುದರಿಂದ ಅವುಗಳನ್ನು ಕಾಲ ಮಿತಿಯೊಳಗೆ ಬಗೆಹರಿಸಲು ಸೂಚಿಸಲಾಗಿದೆ. ಕೆಲವು ನಿರ್ದಿಷ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಷೋಕಾಸ್ ನೋಟೀಸು ನೀಡಲು ಕ್ರಮಕೈಗೊಳ್ಳಲಾಗಿದೆ. ಲೇಔಟ್ ರೂಲ್ಸ್ ಅಪ್ರೂವಲ್‌ಗೆ ಸಂಬಂಧಿಸಿ ಶೀಘ್ರವೇ ನೀತಿ ನಿರೂಪಿಸಲ್ಪಡುವುದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಸಚಿವ ಖಾದರ್ ಹೇಳಿದರು.

ರಾಜ್ಯದಲ್ಲಿ ಪ್ರಥಮ ಪ್ರಯತ್ನವಾಗಿ ಇದೇ ಮೊದಲ ಬಾರಿಗೆ ಮೂಡಾ ಅದಲತ್ ನಡೆಸಲಾಗಿದೆ. ಕಾನೂನು ಸರಳೀಕರಣ ಹಾಗೂ ಆನ್‌ಲೈನ್ ಗೊಳಿಸುವುದರಿಂದ ಹಾಗೂ ಏಕಗವಾಕ್ಷಿ ವ್ಯವಸ್ಥೆ ಜಾರಿಯಿಂದ ಭವಿಷ್ಯದಲ್ಲಿ ಜನರಿಗೆ ನೆರವಾಗಲಿದೆ. ಇದೇ ಮಾದರಿಯನ್ನು ಮುಂದಿನ ಹಂತದಲ್ಲಿ ರಾಜ್ಯದಲ್ಲಿ ಜಾರಿಗೆ ತರಲು ಪ್ರಯತ್ನಿಸಲಾಗುವುದು.ಇಂದು ಸ್ವೀಕರಿಸಿದ ಕೆಲವು ಪ್ರಕರಣಗಳಿಗೆ ಸಂಬಂಧಿಸಿ ಆಗಸ್ಟ್ 7ರಂದು ಸ್ಥಳ ಭೇಟಿ ಮಾಡಿ ಪರಿಶೀಲನೆಗೆ ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಶಾಸಕರಾದ ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಮೂಡಾ ಆಯುಕ್ತ ಶ್ರೀಕಾಂತ್ ರಾವ್, ಮನಪಾ ಆಯುಕ್ತ ಮುಹಮ್ಮದ್ ನಝೀರ್ ಹಾಗೂ ಮನಪಾ ಹಾಗೂ ಮೂಡಾ ಅಧಿಕಾರಿಗಳು ಉಪಸ್ಥಿತರಿದ್ದರು.

ಏಕನಿವೇಶನಕ್ಕೆ ನೇರವಾಗಿ ಅರ್ಜಿದಾರರೇ ಬನ್ನಿ
ಮೂಡಾ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಕುರಿತಂತೆ ಅದಾಲತ್‌ನಲ್ಲಿ ವ್ಯಕ್ತವಾದ ಜನಸಾಮಾನ್ಯರ ವಿರೋಧದ ಕುರಿತು ಪ್ರತಿಕ್ರಿಯಿಸಿದ ಸಚಿವ ಯು.ಟಿ.ಖಾದರ್, ಏಕ ನಿವೇಶನ, ವಲಯ ದೃಢೀಕರಣ ಪತ್ರ ಸೇರಿದಂತೆ ಮೂಡಾಗೆ ಸಂಬಂಧಿಸಿದ ಕೆಲಸ ಕಾರ್ಯಗಳಿಗೆ ಅರ್ಜಿದಾರರು ನೇರವಾಗಿ ಆಯುಕ್ತರನ್ನೇ ಭೇಟಿಯಾಗಬಹುದು. ಅವರಂದ ಕೆಲಸ ಕಾರ್ಯ ವಿಳಂಬವಾದಲ್ಲಿ ಜಿಲ್ಲಾಧಿಕಾರಿ ಅಥವಾ ಜನಪ್ರತಿನಿಧಿಗಳನ್ನು ಭೇಟಿಯಾಗಬಹುದು. ಮಧ್ಯವರ್ತಿಗಳಿಂದ ದೂರವಿರಿ ಎಂದು ಸಚಿವ ಯು.ಟಿ.ಖಾದರ್ ಜನಸಾಮಾನ್ಯರಿಗೆ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News