×
Ad

ಪತ್ರಿಕೆಗಳು ಉದ್ಯಮದ ಹಿಡಿತದಲ್ಲಿದ್ದರೆ ಸತ್ಯಗಳು ಕೊಲ್ಲಲ್ಪಡುತ್ತವೆ: ದತ್ತ

Update: 2018-08-05 19:24 IST

ಬ್ರಹ್ಮಾವರ, ಆ.5: ಕಾನೂನು, ರಾಜಕಾರಣ ಮತ್ತು ಆಡಳಿತ ವ್ಯವಸ್ಥೆಯನ್ನು ನಿಯಂತ್ರಿಸುವ ಪತ್ರಿಕೋದ್ಯಮ ಇಂದು ಉದ್ಯಮವಾಗುತ್ತಿರುವುದು ದೊಡ್ಡ ದುರಂತ. ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳು ಉದ್ಯಮದ ಹಿಡಿತಕ್ಕೆ ಬಂದರೆ ಸತ್ಯಗಳು ಕೊಲ್ಲಲ್ಪಡುತ್ತವೆ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಹೇಳಿದ್ದಾರೆ.

ಬ್ರಹ್ಮಾವರದ ಬಂಟರ ಭವನದಲ್ಲಿ ಭಾನುವಾರ ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ನಡೆದ ‘ಪತ್ರಿಕೋದ್ಯಮ, ರಾಜಕಾರಣ ಮತ್ತು ಕಾನೂನು’ ಮಾಧ್ಯಮ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಪತ್ರಿಕೆಗಳು ಉದ್ಯಮವಾಗುತ್ತಿರುವುದರಿಂದ ಅನೇಕ ಸತ್ಯಗಳು ಹೊರ ಬಾರದೆ ಸಾಯುತ್ತಿವೆ. ಒಬ್ಬ ಪತ್ರಕರ್ತ ಬರಹದ ಮೂಲಕ ಜನಾಭಿಪ್ರಾಯ ಮೂಡಿಸಬಹುದು ಹಾಗೂ ಸಾಮಾಜಿಕ ಕಳಕಳಿಯನ್ನು ಬಿಂಬಿಸಬಹುದು ಎಂಬುದಕ್ಕೆ ವಡ್ಡರ್ಸೆ ನಿದರ್ಶನರಾಗಿದ್ದರು ಎಂದರು.

ಪತ್ರಕರ್ತ ಹಾಗೂ ನ್ಯಾಯವಾದಿ ಸುಧೀರ್ ಕುಮಾರ್ ಮರೋಳಿ ಮಾತ ನಾಡಿ, ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಮ್ಮ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ದ ಪುನರ್ ವ್ಯಾಖ್ಯಾನ ಆಗಬೇಕಾದ ಅಗತ್ಯ ಇದೆ. ಮಾಧ್ಯಮಗಳ ಗುರಿ ಕಲ್ಯಾಣ ರಾಜ್ಯ ಸ್ಥಾಪನೆ ಆಗಬೇಕು ಎಂದು ಹೇಳಿದರು.

ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಇಂದು ಮಾಧ್ಯಮಗಳಲ್ಲಿ ಮೌಲ್ಯಗಳ ಕುಸಿತ ಆಗುತ್ತಿದೆ. ಈ ನಿಟ್ಟನಲ್ಲಿ ನಮ್ಮ ಪೂರ್ವಜರ ಸಂಸ್ಕೃತಿ, ಕಲೆಯ ಪೋಷಿಸಿ ಯುವಜನತೆಗೆ ವರ್ಗಾಯಿಸುವ ಕೆಲಸ ಆಗಬೇಕೆಂದು ತಿಳಿಸಿದರು.

ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ, ಕಾರ್ಯದರ್ಶಿ ರಾಜೇಶ್ ಗಾಣಿಗ ಅಚ್ಲಾಡಿ ಉಪಸ್ಥಿತರಿದ್ದರು. ಪತ್ರಕರ್ತ ಗಣೇಶ್ ಸಾಯಿಬ್ರಕಟ್ಟೆ ಸ್ವಾಗತಿಸಿದರು. ಶೇಷಗಿರಿ ಭಟ್ ವಂದಿಸಿದರು. ನಾಗರಾಜ್ ಅಲ್ತಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News