ಶಿರೂರು ಸ್ವಾಮೀಜಿ ಅಭಿಮಾನಿ ಸಮಿತಿ ರಚನೆ
ಉಡುಪಿ, ಆ. 5: ಶಿರೂರು ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಗೂಢ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವ ಪೊಲೀಸರಿಗೆ ಬೆಂಬಲಿಸುವ ಹಾಗೂ ನಿಗೂಢ ಸಾವಿನ ಪ್ರಕರಣವನ್ನು ಶೀಘ್ರವೇ ಭೇದಿಸುವಂತೆ ಒತ್ತಾಯಿಸುವ ನಿಟ್ಟಿನಲ್ಲಿ ಶಿರೂರು ಶ್ರೀಗಳ ಅಭಿಮಾನಿ ಸಮಿತಿಯನ್ನು ರಚಿಸಲಾಗಿದೆ.
ಉಡುಪಿಯಲ್ಲಿ ಇತ್ತೀಚೆಗೆ ಶಿರೂರು ಸ್ವಾಮೀಜಿಯ ಅಭಿಮಾನಿಗಳು, ಹಿತೈಷಿಗಳು ಹಾಗೂ ಶಿಷ್ಯ ವರ್ಗ ಸಭೆ ಸೇರಿ ಈ ಸಮಿತಿ ರಚಿಸಿದೆ. ಸಭೆಯಲ್ಲಿ ಮುಂದಿನ ಹೋರಾಟದ ಕುರಿತು ಪ್ರಮುಖ ಚರ್ಚೆಗಳನ್ನು ನಡೆಸಲಾಯಿತು. ಮುಂದಿನ ವಾರ ಮತ್ತೊಂದು ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುವ ಕುರಿತು ನಿರ್ಧರಿಸಲಾಯಿತು. ಕುಂದಾಪುರ, ಕಾರ್ಕಳ, ಉಡುಪಿ, ಮಂಗಳೂರು, ಮುಂಬೈ, ಬೆಂಗಳೂರುಗಳಲ್ಲಿ ಕೂಡ ಸಮಿತಿ ರಚಿಸಲಾಗಿದೆ.
ಈ ಸಂದರ್ಭದಲ್ಲಿ ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಕೇಮಾರು ಶ್ರೀಈಶ ವಿಠಲ ಸ್ವಾಮೀಜಿ, ವಜ್ರದೇಹಿ ಶ್ರೀರಾಜ ಶೇಖರನಂದ ಸ್ವಾಮೀಜಿ, ಬಾರ್ಕೂರು ಮಹಾ ಸಂಸ್ಥಾನಂನ ಸಂತೋಷ್ ಗುರೂಜಿ, ಅಧ್ಯಕ್ಷರಾಗಿ ರಾಧಾಕೃಷ್ಣ ಶೆಟ್ಟಿ, ಉಪಾಧ್ಯಕ್ಷರುಗಳಾಗಿ ಸುನೀಲ್ ಬೈಲೆಕೆರೆ, ಜಯರಾಂ ಅಂಬೆಕಲ್ಲು, ಪ್ರಕಾಶ್ ಶೆಟ್ಟಿ ತೆಕ್ಕಟ್ಟೆ, ಅಂಬಿಕಾ ನಾಯಕ್, ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ರಾವ್, ಸಂಘಟನೆ ಕಾರ್ಯದರ್ಶಿ ಗಳಾಗಿ ದಿನೇಶ್ ಪಾಂಗಾಳ, ನಿತೇಶ್ ನಿಟ್ಟೂರು, ರಾಜೇಶ್, ಮೋಹನ್ ತಿಂಗಳಾಯ, ಸಾಮಾಜಿಕ ಜಾಲತಾಣ ಉಸ್ತುವಾರಿಯಾಗಿ ಶಿಜಿತ್, ಸೋನು ಪಾಂಗಾಳ, ಕಾನೂನು ಸಲಹೆಗಾರರಾಗಿ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಅವರನ್ನು ಆಯ್ಕೆ ಮಾಡಲಾಯಿತು.