×
Ad

ಆರೋಪಿ ಮೀರತ್‌ನಲ್ಲಿ ಇರಲಿಲ್ಲ ಎಂದು ಸಾಬೀತುಗೊಳಿಸಿದ ಕೈಬರಹ ಪರೀಕ್ಷೆ

Update: 2018-08-05 20:53 IST

ಜಮ್ಮು,ಆ.5: ಜಮ್ಮುವಿನ ಕಥುವಾದಲ್ಲಿ ಎಂಟರ ಹರೆಯದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ವಿಶಾಲ ಜಂಗೋತ್ರಾ ಜನವರಿಯಲ್ಲಿ ಅಪರಾಧ ನಡೆದಾಗ ಮೀರತ್‌ನಲ್ಲಿರಲಿಲ್ಲ ಎನ್ನುವುದನ್ನು ಜಮ್ಮು-ಕಾಶ್ಮೀರ ಪೊಲೀಸ್‌ನ ಕ್ರೈಂ ಬ್ರಾಂಚ್ ನಡೆಸಿದ ವೈಜ್ಞಾನಿಕ ಪರೀಕ್ಷೆಗಳು ದೃಢಪಡಿಸಿವೆ.

ವಿಶಾಲ್ ತನ್ನ ತಂದೆ ಹಾಗೂ ಪ್ರಕರಣದ ಮುಖ್ಯ ಆರೋಪಿ ಸಾಂಜಿ ರಾಮನ ಶಾಮೀಲಾತಿ ಮತ್ತು ನೆರವಿನೊಂದಿಗೆ ದಾಖಲೆಗಳನ್ನು ತಿರುಚುವ ಮತ್ತು ಸುಳ್ಳು ಸಾಕ್ಷವನ್ನು ಸೃಷ್ಟಿಸುವ ಮೂಲಕ ಅಪರಾಧ ಸ್ಥಳದಲ್ಲಿ ತಾನಿರಲಿಲ್ಲ ಎನ್ನುವುದಕ್ಕೆ ಪುರಾವೆಯನ್ನು ಸೃಷ್ಟಿಸಲು ಪ್ರಯತ್ನಿಸಿದ್ದ ಎಂದು ಪೋಲಿಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯಲ್ಲಿ ಹೇಳಲಾಗಿದೆ.

ವಿಶಾಲನ ಉತ್ತರ ಪತ್ರಿಕೆಗಳು ಮತ್ತು ಪರೀಕ್ಷಾ ಹಾಜರಾತಿಯ ದಾಖಲೆಗಳನ್ನು ಕೈಬರಹ ತಜ್ಞರಿಗೆ ಸಲ್ಲಿಸಲಾಗಿದ್ದು, ಆರೋಪಿಯ ಮೊದಲ ಹೆಸರು (ವಿಶಾಲ)ಜ.12 ಮತ್ತು 15ರ ಹಾಜರಾತಿ ದಾಖಲೆಗಳಲ್ಲಿನ ಆತನ ಸಹಿಗಳೊಂದಿಗೆ ತಾಳೆಯಾಗುತ್ತಿಲ್ಲ ಎಂದು ತಜ್ಞರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.

ಬಾಲಕಿಯನ್ನು ಜ.10ರಂದು ಅಪಹರಿಸಲಾಗಿತ್ತು ಮತ್ತು ಜ.13ರಂದು ರಾತ್ರಿ ಆಕೆಯನ್ನು ಕೊಲ್ಲಲಾಗಿತ್ತು. ವಿಶಾಲ್,ಆತನ ಅಪ್ರಾಪ್ತ ವಯಸ್ಕ ಸೋದರ ಸಂಬಂಧಿ ಮತ್ತು ಖಜುರಿಯಾ ಸೇರಿಕೊಂಡು ಜ.14ರಂದು ಶವವನ್ನು ನಿರ್ಜನ ಸ್ಥಳದಲ್ಲಿ ಎಸೆದಿದ್ದರು ಮತ್ತು ನಂತರ ವಿಶಾಲ್ ಮೀರತ್‌ಗೆ ರೈಲು ಹತ್ತಿದ್ದ ಎಂದು ಪೊಲೀಸರು ದೋಷಾರೋಪಣೆ ಪಟ್ಟಿಯಲ್ಲಿ ತಿಳಿಸಿದ್ದಾರೆ. ಜ.17ರಂದು ಬಾಲಕಿಯ ಶವ ಪತ್ತೆಯಾಗಿತ್ತು.

ಜ.12 ಮತ್ತು 15ರ ಹಾಜರಿ ದಾಖಲೆಗಳಲ್ಲಿ ಆರೋಪಿಯ ಅಡ್ಡಹೆಸರನ್ನು (ಜಂಗೋತ್ರಾ) ಅನಧಿಕೃತವಾಗಿ ಸೇರಿಸಿದ್ದಿರಬಹುದು ಎಂದೂ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜ.12 ಮತ್ತು 15ರ ಉತ್ತರಪತ್ರಿಕೆಗಳೊಂದಿಗೆ ಹೋಲಿಸಲು ಆತನ ಜ.9ರ ಉತ್ತರ ಪತ್ರಿಕೆಯನ್ನೂ ಪೊಲೀಸರು ವಶಪಡಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News