ತಪ್ಪೊಪ್ಪಿಗೆಗಳ ನಿಷೇಧ ಸಾಧ್ಯವಿಲ್ಲ:ಕೇರಳ ಚರ್ಚ್

Update: 2018-08-05 15:26 GMT

 ತಿರುವನಂತಪುರ,ಆ.5: ಚರ್ಚ್‌ಗಳಲ್ಲಿ ತಪ್ಪೊಪ್ಪಿಗೆ ಪದ್ಧತಿಯನ್ನು ನಿಷೇಧಿಸುವಂತೆ ರಾಷ್ಟ್ರಿಯ ಮಹಿಳಾ ಆಯೋಗದ ಶಿಫಾರಸಿನ ವಿರುದ್ಧ ಸಮುದಾಯದ ಪ್ರತಿಭಟನೆ ರವಿವಾರ ಮಲಂಕರ ಆರ್ಥೊಡೆಕ್ಸ್ ಚರ್ಚ್‌ನಲ್ಲಿ ನಡೆಯಿತು.

ಆಯೋಗದ ಶಿಫಾರಸು ಎಲ್ಲ ಧರ್ಮಗಳನ್ನು ಮತ್ತು ಪಂಥಗಳನ್ನು ಸಹಿಷ್ಣುತೆಯಿಂದ ಗೌರವಿಸುವ ಪುರಾತನ ಭಾರತೀಯ ಸಂಸ್ಕೃತಿಯ ಆಶಯ ಮತ್ತು ಅದರ ವೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಫಾ.ಜಾರ್ಜ್ ಅಬ್ರಹಾಂ ಅವರು ಹೇಳಿದರು.

ಭಾರತದ ಸಂವಿಧಾನದಲ್ಲಿ ಅಡಕವಾಗಿರುವ ಧಾರ್ಮಿಕ ಸ್ವಾತಂತ್ರಕ್ಕೆ ವಿರುದ್ಧವಾಗಿರುವ ಆಯೋಗದ ಏಕಪಕ್ಷೀಯ ಮತ್ತು ಅಪಕ್ವ ಪ್ರಸ್ತಾವನೆಯನ್ನು ತಿರಸ್ಕರಿಸುವಂತೆ ನಾವು ಕೇಂದ್ರ ಸರಕಾರವನ್ನು ಕೋರುತ್ತೇವೆ ಎಂದರು.

ಕ್ಯಾಥೋಲಿಕ್ ಚರ್ಚ್‌ನ ನಾಯಕರೂ ಆಯೋಗದ ಶಿಫಾರಸನ್ನು ಟೀಕಿಸಿದ್ದು, ಅದು ಧಾರ್ಮಿಕ ಸ್ವಾತಂತ್ರದ ನೇರ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.

ಧರ್ಮಗುರುಗಳು ಮತ್ತು ಚರ್ಚ್ ಅಧಿಕಾರಿಗಳಿಂದ ಅತ್ಯಾಚಾರ ಹಾಗೂ ಲೈಂಗಿಕ ಶೋಷಣೆಗಳ ವಿರುದ್ಧ ಹಲವಾರು ಮಹಿಳೆಯರ ದೂರುಗಳ ಹಿನ್ನೆಲೆಯಲ್ಲಿ ಮಹಿಳಾ ಆಯೋಗವು ಕಳೆದ ತಿಂಗಳು ಈ ಶಿಫಾರಸನ್ನು ಮಾಡಿತ್ತು. ಅಂತಹ ಪ್ರಕರಣಗಳಲ್ಲಿ ಒಂದು ತಪ್ಪೊಪ್ಪಿಗೆಗೆ ಸಂಬಂಧಿಸಿತ್ತು ಮತ್ತು ತನ್ನ ಮೇಲೆ ವರ್ಷಗಳಿಂದಲೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಮಹಿಳೆಯೋರ್ವಳು ಆರೋಪಿಸಿದ್ದ ಪ್ರಕರಣದಲ್ಲಿ ಮಲಂಕರ ಆರ್ಥೊಡೆಕ್ಸ್ ಸಿರಿಯನ್ ಚರ್ಚ್‌ನ ಹೆಸರು ಕೇಳಿಬಂದಿತ್ತು.

ತಪ್ಪೊಪ್ಪಿಗೆ ವ್ಯವಸ್ಥೆಯು ಮಹಿಳೆಯರ ಸುರಕ್ಷತೆಗೆ ಅಪಾಯಕಾರಿಯಾಗಿರುವುದರಿಂದ ಸರಕಾರವು ಮಧ್ಯ ಪ್ರವೇಶಿಸಬೇಕು ಮತ್ತು ಈ ಪದ್ಧತಿಯನ್ನು ನಿಷೇಧಿಸಬೇಕು ಎಂದು ಆಯೋಗವು ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು.

ತಮ್ಮನ್ನು ವರ್ಷಗಳಿಂದಲೂ ಲೈಂಗಿಕವಾಗಿ ಶೋಷಿಸಲಾಗುತ್ತಿತ್ತು ಎಂದು ಕಳೆದ ತಿಂಗಳು ಮೂವರು ಮಹಿಳೆಯರು ಆರೋಪಿಸಿದ್ದರು. ಚರ್ಚ್ ಈ ಬಗ್ಗೆ ನಿಷ್ಪಕ್ಷಪಾತ ತನಿಖೆಯನ್ನು ನಡೆಸುವ ಬದಲು ವಿಷಯವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದೂ ಅವರು ಆರೋಪಿಸಿದ್ದರು.

ಕಳೆದೊಂದು ವರ್ಷದಲ್ಲಿ ಲೈಂಗಿಕ ಶೋಷಣೆ ಮತ್ತು ಅಪ್ರಾಪ್ತ ವಯಸ್ಕ ಬಾಲಕಿಯರ ಮೇಲೆ ಅತ್ಯಾಚಾರದ ಆರೋಪಗಳಲ್ಲಿ ಕೇರಳದ ವಿವಿಧ ಚರ್ಚ್‌ಗಳ ಡಝನ್‌ಗೂ ಅಧಿಕ ಧರ್ಮಗುರುಗಳು ಬಂಧಿಸಲ್ಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News