ರಾಣಿ ಅಬ್ಬಕ್ಕ ನಾಡಿನ ಸಂಸ್ಕೃತಿ, ಪ್ರತೀಕ, ನಮ್ಮ ಹೆಮ್ಮೆ: ಜಯಮಾಲಾ
ಬಂಟ್ವಾಳ, ಜು. 11: ರಾಣಿ ಅಬ್ಬಕ್ಕ ನಾಡಿನ ಸಂಸ್ಕೃತಿ, ಪ್ರತೀಕ, ನಮ್ಮ ಹೆಮ್ಮೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಅವರು ಅಭಿಪ್ರಾಯಪಟ್ಟಿದ್ದಾರೆ.
ಬಂಟ್ವಾಳದ ಸಂಚಯಗಿರಿಯ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ, ತದನಂತರ ಅಧ್ಯಯನ ಕೇಂದ್ರದ ಎಲ್ಲ ವಿಭಾಗಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಣಿ ಅಬ್ಬಕ್ಕ ಚರಿತ್ರೆಯನ್ನು ಕಟ್ಟುವಾಗ ಆಕೆಗೆ ಅನ್ಯಾಯವಾಗಿದೆ. ತುಳು ಬದುಕನ್ನು ಜನರಿಗೆ ತಿಳಿಸುವುದರ ಜೊತೆಗೆ ಭಾರತದಲ್ಲಿ ಮ್ಯೂಸಿಯಂ ಸಂಸ್ಕೃತಿಯನ್ನು ಉದ್ದೀಪನಗೊಳಿಸಿದ್ದಾರೆ ಎಂದ ಅವರು ಇಲ್ಲಿನ ಅಧ್ಯಯನ ಕೇಂದ್ರ ಹಾಗೂ ಆರ್ಟ್ ಗ್ಯಾಲರಿಯೂ ಪ್ರಾಚೀನ ಬದುಕನ್ನು ತೆರೆದಿಡುವ ವಸ್ತುಸಂಗ್ರಹಾಲಯವಾಗಿದ್ದು, ತನಗೆ ದೇವಾಲಯಕ್ಕೆ ಬಂದಷ್ಟು ಖುಷಿಯಾಗಿದೆ ಎಂದರು.
ಕೇಂದ್ರದ ಅಬ್ಬಕ್ಕ ಕಲಾ ಗ್ಯಾಲರಿ ಮಹಿಳೆಯೊಬ್ಬಳ ಸಾಹಸಗಾಥೆಯನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಒಂದು ಅದ್ಭುತ ಪ್ರಯತ್ನವೆಂದು ಅಭಿಪ್ರಾಯಪಟ್ಟರು.
ಅಬ್ಬಕ್ಕ ಅಧ್ಯಯನ ಕೇಂದ್ರದಲ್ಲಿದ್ದ ಆರ್ಟ್ ಗ್ಯಾಲರಿಯಲ್ಲಿ ರಾಣಿ ಅಬ್ಬಕ್ಕನ ಬದುಕಿನ ಕಥೆಯನ್ನು ಆಧರಿಸಿ ಬರೆದ ಚಿತ್ರಗಳನ್ನು ನೋಡಿದ ಜಯಮಾಲಾ ಕೆಲವು ಚಿತ್ರಗಳ ಫೋಟೋಗನ್ನು ತನ್ನ ಮೊಬೈಲ್ ನಲ್ಲಿ ಸೆರೆಹಿಡಿದರು.
ಕೇಂದ್ರದ ಹೃದಯ ಭಾಗದಂತಿರುವ ತುಳು ಬದುಕು ವಸ್ತು ಸಂಗ್ರಹಾಲಯದಲ್ಲಿನ ಕೆಳಸ್ತರದ ಮಹಿಳೆಯರು ತಲೆ ಬಾಚುವ ಸಲುವಾಗಿ ಬಳಸುತ್ತಿದ್ದ ಪೊರಕೆ ಕಡ್ಡಿಯ ಬಾಚಣಿಕೆ ಹಾಗೂ ಶ್ರೀಮಂತ ವರ್ಗದವರ ಕಂಚು ಹಾಗೂ ದಂತದಿಂದ ರಚಿಸಲ್ಪಟ್ಟ ಬಾಚಣಿಕೆಯನ್ನು ಹಾಗೂ ಇನ್ನಿತರ ವಸ್ತುಗಳ ಬಗ್ಗೆ ಮಾಜಿ ಸಚಿವ ಬಿ.ರಮಾನಾಥ ರೈ, ಕೇಂದ್ರದ ರೂವಾರಿಗಳಾದ ಪ್ರೊ.ತುಕಾರಾಮ ಪೂಜಾರಿ, ಪ್ರೊ. ಆಶಾಲತಾ ಸುವರ್ಣ ಹಾಗೂ ಅವರ ಪುತ್ರಿ ಸಿಂಧೂರ ಅವರು ವಿವರ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ, ಜಿಲ್ಲಾ ಪಂಚಾಯತ್ ಸದಸ್ಯರಾದ ಬಿ.ಪದ್ಮಶೇಖರ ಜೈನ್, ಚಂದ್ರಪ್ರಕಾಶ ಶೆಟ್ಟಿ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಪ್ರಮುಖರಾದ ಬೇಬಿ ಕುಂದರ್, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಪ್ರಮುಖರಾದ ಬೇಬಿ ಕುಂದರ್, ಸದಾಶಿವ ಬಂಗೇರ, ಲೋಕೇಶ ಸುವರ್ಣ, ಮಧುಸೂಧನ ಶೆಣೈ, ವೆಂಕಪ್ಪ ಪೂಜಾರಿ ಉಪಸ್ಥಿತರಿದ್ದರು.
ಅಬ್ಬಕ್ಕ ಕುರಿತ ಚಲನಚಿತ್ರ ನಿರ್ಮಿಸುವ ಇಚ್ಛೆಯಿದೆ:
ರಾಣಿ ಅಬ್ಬಕ್ಕ ಕುರಿತು ಚಲನಚಿತ್ರ ನಿರ್ಮಿಸುವ ಇಚ್ಛೆಯಿದ್ದು, ಇದು ತನ್ನ ಕನಸು ಕೂಡಾ ಹೌದು. ಇದೊಂದು ಐತಿಹಾಸಿಕ ಚಿತ್ರವಾಗಲಿದೆ. ಅಬ್ಬಕ್ಕನ ರೂಪದ ಕಲ್ಪನೆಗಿಂದ ಅಬ್ಬಕ್ಕನ ಶಕ್ತಿಯನ್ನು ಜನರಿಗೆ ತೋರಿಸುವ ಉದ್ದೇಶ ಇದರಲ್ಲಡಗಿದೆ. ಸಿನಿಮಾವನ್ನು ಮಾಡುವುದು ನನ್ನ ಹೆಬ್ಬಯಕೆಯಾಗಿದೆ.
- ಜಯಮಾಲಾ, ಕನ್ನಡ ಮತ್ತು ಸಂಸ್ಕೃತಿ ಸಚಿವೆ