ಅಂದು ಹೈಕೋರ್ಟ್ ನ್ಯಾಯಾಧೀಶ, ಇಂದು ಗದ್ದೆಯಲ್ಲಿ ಉಳುಮೆ ಮಾಡುವ ಕೃಷಿಕ !

Update: 2018-08-06 14:04 GMT

ಚೆನ್ನೈ, ಆ.6: ಮದ್ರಾಸ್ ಹೈಕೋರ್ಟಿನ ಮಾಜಿ ನ್ಯಾಯಾಧೀಶ ಎ. ಸೆಲ್ವಂ ಅವರ ಎರಡು ವಿಡಿಯೋಗಳು ಕಳೆದ ಕೆಲ ದಿನಗಳಿಂದ ವೈರಲ್ ಆಗಿವೆ. ಟಿ ಶರ್ಟ್ ಮತ್ತು ಶಾರ್ಟ್ಸ್ ಧರಿಸಿದ, ತಲೆಯಲ್ಲಿ ಮುಂಡಾಸು ಸುತ್ತಿರುವ ಈ ಮಾಜಿ ನ್ಯಾಯಾಧೀಶರು ಟ್ರ್ಯಾಕ್ಟರ್ ಒಂದರಲ್ಲಿ ಕುಳಿತು ಗದ್ದೆಯನ್ನು ಉಳುಮೆ ಮಾಡುತ್ತಿರುವ ದೃಶ್ಯಗಳು ಈ ವೀಡಿಯೋಗಳಲ್ಲಿವೆ.

ತಮ್ಮ 62ನೇ ವಯಸ್ಸಿನಲ್ಲಿ ಈ ವರ್ಷದ ಎಪ್ರಿಲ್ ತಿಂಗಳಲ್ಲಿ ನಿವೃತ್ತಿ ಹೊಂದಿದ ಸೆಲ್ವಂ ನಂತರ ತಮ್ಮ ಹುಟ್ಟೂರು ಶಿವಗಂಗಾ ಜಿಲ್ಲೆಯ ತಿರುಪತ್ತೂರು ತಾಲೂಕಿನ ಪುಲಂಕುರಿಚಿ ಗ್ರಾಮಕ್ಕೆ ವಾಸ್ತವ್ಯ ಬದಲಿಸಿದ್ದರು. ತಾವು ಯಾವತ್ತೂ ಮಾಡಲು ಹಂಬಲಿಸಿದ್ದ ಕೃಷಿ ಕಾರ್ಯಗಳನ್ನೇ ಅಲ್ಲಿ ಅವರು ಕೈಗೆತ್ತಿಕೊಂಡಿದ್ದರು.

ಮೂಲತಃ ಕೃಷಿ ಹಿನ್ನೆಲೆಯ ಕುಟುಂಬದವರಾಗಿರುವ ಸೆಲ್ವಂ, ತಮ್ಮ ಪೂರ್ವಜರು ಕಳೆದೊಂದು ಶತಮಾನದಿಂದಲೂ ಕೃಷಿಯಲ್ಲಿ ತೊಡಗಿದ್ದವರು ಎಂದು ಹೇಳುತ್ತಾರೆ.

ಕಲಿಕೆಯಲ್ಲಿ ಅವರು ಮುಂದಿದ್ದುದರಿಂದ ಅವರನ್ನು ಉನ್ನತ ಶಿಕ್ಷಣಕ್ಕಾಗಿ ಮಧುರೈಗೆ ಕಳುಹಿಸಲಾಗಿತ್ತು. ಕಾನೂನು ಶಿಕ್ಷಣ ಪಡೆದ ಅವರು ಆರಂಭದಲ್ಲಿ ಮಧುರೈಯಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು, ನಂತರ ಮದ್ರಾಸ್ ಹೈಕೋರ್ಟಿನಲ್ಲಿ ಖಾಯಂ ನ್ಯಾಯಾಧೀಶರಾಗಿ ಅವರ ಸೇವೆ ಮುಂದುವರಿದಿತ್ತು. ನಿವೃತ್ತಿಯ ನಂತರ ತಮ್ಮ ಕುಟುಂಬದ ಐದು ಎಕರೆ ಕೃಷಿ ಭೂಮಿಯಲ್ಲಿ ಈಗ ಅವರು ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ಬೆಳಿಗ್ಗೆ 6ರಿಂದ ಹಿಡಿದು ಸಂಜೆ 6 ಗಂಟೆಯ ತನಕ ಅವರು ತಮ್ಮ ಗದ್ದೆಯಲ್ಲಿಯೇ ಇರುತ್ತಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News