×
Ad

ಮುಂಡ್ಕೂರು ಮನೆಗಳ್ಳತನ ಪ್ರಕರಣ: ಆರೋಪಿ ಬಂಧನ

Update: 2018-08-06 19:45 IST

ಉಡುಪಿ, ಆ.6: ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮುಂಡ್ಕೂರು ಎಂಬಲ್ಲಿ ಮೂರು ಮನೆಗಳಿಗೆ ನುಗ್ಗಿ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಕಾರ್ಕಳ ಪೊಲೀಸರು ಆ.5ರಂದು ರಾತ್ರಿ 8.30ಕ್ಕೆ ಮುಂಡ್ಕೂರು ಗ್ರಾಮದ ಇನ್ನಾ ಕ್ರಾಸ್ ಬಸ್ ನಿಲ್ದಾಣದ ಬಳಿ ಬಂಧಿಸಿ, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತನನ್ನು ಮುಂಡ್ಕೂರು ನಿವಾಸಿ ಶೈಲೇಶ್ ಶೆಟ್ಟಿ ಎಂದು ಗುರುತಿಸಲಾಗಿದೆ. ಈತ 2017ರಲ್ಲಿ ಮುಂಡ್ಕೂರು ಗ್ರಾಮದ ಜಯ ಎನ್.ಶೆಟ್ಟಿ, ಜ್ಯೋತಿ ಎನ್. ಶೆಟ್ಟಿ ಹಾಗೂ 2018ರಲ್ಲಿ ಮುಂಡ್ಕೂರು ಗ್ರಾಮದ ರಮೇಶ್ ಶೆಟ್ಟಿ ಎಂಬವರ ಮನೆಗೆ ನುಗ್ಗಿ ಚಿನ್ನಾಭರಣಗಳನ್ನು ಕಳವು ಮಾಡಿದ್ದನು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಮೂರು ಪ್ರಕರಣಗಳ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ ಕಾರ್ಕಳ ವೃತ್ತ ನಿರೀಕ್ಷಕ ಜಾಯ್ ಅಂತೋನಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಆರೋಪಿ ಈ ಮೂರು ಪ್ರಕರಣಗಳಲ್ಲಿ ಚಿನ್ನಾಭರಣಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದು, ಅದರಂತೆ ಆತನಿಂದ ಕಳವುಗೈದ ಒಟ್ಟು ಆರು ಲಕ್ಷ ರೂ. ಮೌಲ್ಯದ ಸುಮಾರು 210 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಇಂದು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೊಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.

ಈ ಕಾರ್ಯಾಚರಣೆಯಲ್ಲಿ ಕಾರ್ಕಳ ಗ್ರಾಮಾಂತರ ಠಾಣಾ ಎಸ್ಸೈ ವಾಸಪ್ಪ ನಾಯ್ಕ್, ರಾಜೇಶ್, ಪ್ರಶಾಂತ್, ಗಿರೀಶ್, ಸತೀಶ್ ಬಟ್ವಾಡಿ, ರಮೇಶ್, ಅನ್ವರ್ ಅಲಿ, ಚಾಲಕರಾದ ಜಗದೀಶ್ ಮತ್ತು ಗಿರಿಧರ್ ಪೈ ಪಾಲ್ಗೊಂಡಿದ್ದರು. ಈ ತಂಡಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ 10000ರೂ. ನಗದು ಬಹುಮಾನ ಘೋಷಣೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News