×
Ad

ಬಾಲಿಕಾ ಗೃಹ ಅತ್ಯಾಚಾರ ಪ್ರಕರಣ

Update: 2018-08-06 20:39 IST

ಹೊಸದಿಲ್ಲಿ, ಆ. 6: ಮಝಾಪ್ಫರ್‌ಪುರದ ಬಾಲಿಕಾ ಗೃಹದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅಪರಾಧ ಎಸಗಿದ ಬಿಹಾರದ ಸಚಿವೆ ಮಂಜು ವರ್ಮಾ ಅವರ ಸಂಬಂಧಿಯ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ ನೀಡಿದ್ದಾರೆ.

 ಆದರೆ, ಈ ವಿಷಯಕ್ಕೆ ಸಂಬಂಧಿಸಿ ಆಧಾರ ರಹಿತ ಆರೋಪ ನಿಲ್ಲಿಸುವಂತೆ ಪ್ರತಿಪಕ್ಷಗಳಲ್ಲಿ ಅವರು ವಿನಂತಿಸಿದ್ದಾರೆ. ‘‘ಸಚಿವರ ಯಾರಾದರೂ ಸಂಬಂಧಿಕರು ಈ ಪ್ರಕರಣದಲ್ಲಿ ಭಾಗಿಯಾಗಿದ್ದರೆ, ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ, ಈ ವಿಷಯವನ್ನು ಈಗ ಯಾಕೆ ಎತ್ತಬೇಕು ?, ನಾವು ಅವರಿಗೆ ಕರೆ ಮಾಡಿದ್ದೆವು. ಆದರೆ, ಅವರು ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ. ಆಧಾರ ರಹಿತ ಆರೋಪ ಸಮರ್ಥಿಸಿಕೊಳ್ಳುವುದು ಹೇಗೆ?’’ ಎಂದು ನಿತೀಶ್ ಕುಮಾರ್ ಪ್ರಶ್ನಿಸಿದ್ದಾರೆ. ಬ್ರಿಜೇಶ್ ಠಾಕೂರ್ ಪ್ರಮುಖ ಆರೋಪಿಯಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣ ನಡೆದ ಬಾಲಿಕಾ ಗೃಹಕ್ಕೆ ಸಚಿವರ ಪತ್ನಿ ಚಂಡೇಶ್ವರ್ ವರ್ಮಾ ಭೇಟಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

 ಆದರೆ, ಈ ಆರೋಪ ನಿರಾಕರಿಸಿರುವ ಸಚಿವೆ ಮಂಜು ವರ್ಮಾ, ‘‘ಈ ಪ್ರಕರಣದಲ್ಲಿ ಅವರು ತಪ್ಪೆಸಗಿ ದ್ದರೆ, ನಾನೇ ಅವರನ್ನು ವೈಯುಕ್ತಿಕವಾಗಿ ಗಲ್ಲಿಗೇರಿಸುತ್ತೇನೆ’’ ಎಂದಿದ್ದಾರೆ. ‘‘ಕೆಲವು ಜನರು ರಾಜಕೀಯ ಉದ್ದೇಶದಿಂದ ನನ್ನ ಹಾಗೂ ನನ್ನ ಪತಿಯ ಬಗ್ಗೆ ಆಧಾರ ರಹಿತ ಆರೋಪ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಪ್ರಕರಣದಲ್ಲಿ ನನ್ನ ಪತಿಯ ಪಾತ್ರ ಇಲ್ಲ. ಒಂದು ವೇಳೆ ಅವರು ತಪ್ಪೆಸಗಿರುವುದು ಪತ್ತೆಯಾದರೆ, ಅಳುಕದೆ ಸಾರ್ವಜನಿಕ ವೃತ್ತದಲ್ಲಿ ಅವರನ್ನು ನೇಣಿಗೇರಿಸುತ್ತೇನೆ’’ ಎಂದು ಸಚಿವೆ ಬೇಗುಸರಾಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News