ಕೆನಡ ರಾಯಭಾರಿಯನ್ನು ಉಚ್ಚಾಟಿಸಿದ ಸೌದಿ: ಸೌದಿ ರಾಯಭಾರಿ ವಾಪಸ್

Update: 2018-08-06 15:22 GMT

ರಿಯಾದ್, ಆ. 6: ಸೌದಿ ಅರೇಬಿಯ ಸೋಮವಾರ ಕೆನಡ ರಾಯಭಾರಿಯನ್ನು ಉಚ್ಚಾಟಿಸಿದೆ ಹಾಗೂ ಕೆನಡದಿಂದ ತನ್ನ ರಾಯಭಾರಿಯನ್ನು ವಾಪಸ್ ಕರೆಸಿಕೊಂಡಿದೆ.

ಅದೇ ವೇಳೆ, ಉಭಯ ದೇಶಗಳ ನಡುವಿನ ಎಲ್ಲ ಹೊಸ ವ್ಯಾಪಾರ ವ್ಯವಹಾರಗಳನ್ನು ತಡೆಹಿಡಿದಿದೆ.

ಜೈಲಿನಲ್ಲಿರುವ ಮಾನವಹಕ್ಕುಗಳ ಕಾರ್ಯಕರ್ತರನ್ನು ಬಿಡುಗಡೆ ಮಾಡುವಂತೆ ನಿರಂತರವಾಗಿ ಕೆನಡ ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ, ಪ್ರತಿಭಟನೆಯಾಗಿ ಸೌದಿ ಅರೇಬಿಯ ಈ ಕಠಿಣ ಕ್ರಮ ತೆಗೆದುಕೊಂಡಿದೆ.

ಕೆನಡದ ವರ್ತನೆಗಳು ತನ್ನ ಆಂತರಿಕ ವ್ಯವಹಾರದಲ್ಲಿ ನಡೆಸಲಾಗುತ್ತಿರುವ ಹಸ್ತಕ್ಷೇಪವಾಗಿದೆ ಎಂಬುದಾಗಿ ಅದು ಆರೋಪಿಸಿದೆ.

ದೇಶ ತೊರೆಯಲು ಕೆನಡ ರಾಯಭಾರಿಗೆ ಸೌದಿ ಅರೇಬಿಯ 24 ಗಂಟೆಗಳ ಅವಕಾಶವನ್ನು ನೀಡಿದೆ.

ಈ ಕ್ರಮವು ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ನೂತನ ಆಕ್ರಮಣಕಾರಿ ವಿದೇಶ ನೀತಿಯ ಭಾಗವಾಗಿದೆ ಎಂದು ಹೇಳಲಾಗಿದೆ.

ಇತ್ತೀಚೆಗೆ ಬಂಧಿಸಲಾದ ಮಾನವಹಕ್ಕುಗಳ ಕಾರ್ಯಕರ್ತರನ್ನು ತಕ್ಷಣ ಬಿಡುಗಡೆ ಮಾಡುವಂತೆ ಕೆನಡ ಒತ್ತಾಯಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.

 ‘‘ಕೆನಡದ ನಿಲುವು ಸೌದಿ ಅರೇಬಿಯದ ಆಂತರಿಕ ವ್ಯವಹಾರಗಳಲ್ಲಿ ಅದು ನಡೆಸುವ ಬಹಿರಂಗ ಹಸ್ತಕ್ಷೇಪವಾಗಿದೆ’’ ಎಂದು ಸೌದಿ ವಿದೇಶ ಸಚಿವಾಲಯ ಹೇಳಿದೆ.

ಬಂಧನಗಳಿಂದ ಕಳವಳ ಎಂದಿದ್ದ ಕೆನಡ

 ಪ್ರಶಸ್ತಿ ವಿಜೇತ ಲಿಂಗ ಸಮಾನತೆ ಹಕ್ಕುಗಳ ಕಾರ್ಯಕರ್ತ ಸಮರ್ ಬದಾವಿ ಸೇರಿದಂತೆ ಸೌದಿ ಅರೇಬಿಯದಲ್ಲಿ ಇತ್ತೀಚೆಗೆ ನಡೆದ ಮಹಿಳೆಯರು ಮತ್ತು ಮಾನವಹಕ್ಕುಗಳ ಕಾರ್ಯಕರ್ತರ ಬಂಧನಗಳ ಬಗ್ಗೆ ಕೆನಡ ಕಳೆದ ವಾರ ‘ಗಂಭೀರ ಕಳವಳ’ ವ್ಯಕ್ತಪಡಿಸಿತ್ತು.

 ‘‘ಅವರನ್ನು ಹಾಗೂ ಇತರ ಮಾನವಹಕ್ಕುಗಳ ಶಾಂತಿಯುತ ಹೋರಾಟಗಾರರನ್ನು ತಕ್ಷಣ ಬಿಡುಗಡೆ ಮಾಡುವಂತೆ ನಾವು ಸೌದಿ ಅಧಿಕಾರಿಗಳನ್ನು ಒತ್ತಾಯಿಸುತ್ತೇವೆ’’ ಎಂದು ಕೆನಡ ವಿದೇಶ ಸಚಿವಾಲಯ ಶುಕ್ರವಾರ ಟ್ವೀಟ್ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News