ಹಿರೋಶಿಮ ಪರಮಾಣು ದಾಳಿಯ 73ನೇ ವಾರ್ಷಿಕ ದಿನ ಸ್ಮರಣೆ

Update: 2018-08-06 15:34 GMT

ಟೋಕಿಯೊ, ಆ. 6: ಹಿರೋಶಿಮ ಪರಮಾಣು ಬಾಂಬ್ ದಾಳಿಯ 73ನೇ ವಾರ್ಷಿಕ ದಿನವನ್ನು ಸೋಮವಾರ ಜಪಾನ್‌ನಲ್ಲಿ ಸ್ಮರಿಸಲಾಯಿತು.

1945 ಆಗಸ್ಟ್ 6ರಂದು ನಡೆದ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು ಹಾಗೂ ಪರಮಾಣುಮುಕ್ತ ಕೊರಿಯ ಪರ್ಯಾಯ ದ್ವೀಪ ನಿರ್ಮಾಣದ ಭರವಸೆಯೊಂದಿಗೆ, ಜಗತ್ತಿನಿಂದ ಪರಮಾಣು ಅಸ್ತ್ರಗಳನ್ನು ನಿರ್ಮೂಲಗೊಳಿಸಲು ಈ ಸಂದರ್ಭದಲ್ಲಿ ಕರೆ ನೀಡಲಾಯಿತು.

73 ವರ್ಷಗಳ ಹಿಂದೆ ಇದೇ ದಿನ ಬೆಳಗ್ಗೆ ಹಿರೋಶಿಮ ನಗರದಲ್ಲಿ ನಿರ್ಮಾಣಗೊಂಡ ನರಕ ಸದೃಶ ದೃಶ್ಯವನ್ನು ಉಲ್ಲೇಖಿಸುತ್ತಾ ಮೇಯರ್ ಕಝುಮಿ ಮಟ್ಸುಯಿ ಶಾಂತಿ ಪ್ರತಿಪಾದನೆ ಮಾಡಿದರು.

ಜಗತ್ತಿನಲ್ಲಿ ಅಹಂ-ಕೇಂದ್ರಿತ ನೀತಿಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಪರಮಾಣು ತಡೆಯೆನ್ನುವುದು ಜಾಗತಿಕ ಭದ್ರತೆಗೆ ಬೆದರಿಕೆಯಾಗಿದೆ ಎಂದು ಎಚ್ಚರಿಸಿದರು.

ಪರಮಾಣು ಅಸ್ತ್ರಗಳನ್ನು ಹೊಂದಿದ ಹಾಗೂ ಹೊಂದಿರದ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳು ಹೆಚ್ಚುತ್ತಿರುವ ಬಗ್ಗೆ ಪ್ರಧಾನಿ ಶಿಂರೊ ಅಬೆ ಕಳವಳ ವ್ಯಕ್ತಪಡಿಸಿದರು.

2ನೇ ಮಹಾಯುದ್ಧದ ಕೊನೆ

1945 ಆಗಸ್ಟ್ 6ರಂದು ಜಪಾನ್‌ನ ಹಿರೋಶಿಮ ನಗರದ ಮೇಲೆ ಅಮೆರಿಕ ನಡೆಸಿದ ಬಾಂಬ್ ದಾಳಿಯಲ್ಲಿ 1.40 ಲಕ್ಷಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡರು.

ಮೂರು ದಿನಗಳ ಬಳಿಕ, ಅಂದರೆ 1945 ಆಗಸ್ಟ್ 9ರಂದು ಜಪಾನ್‌ನ ಇನ್ನೊಂದು ನಗರ ನಾಗಸಾಕಿ ಮೇಲೆ ನಡೆದ ದಾಳಿಯಲ್ಲಿ 70,000ಕ್ಕೂ ಅಧಿಕ ಮಂದಿ ಕರಟಿಹೋದರು.

ಇದರೊಂದಿಗೆ ಎರಡನೇ ಮಹಾಯುದ್ಧದಲ್ಲಿ ಜಪಾನ್ ಶರಣಾಯಿತು ಹಾಗೂ ಯುದ್ಧ ಮುಕ್ತಾಯಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News