ಕೋಡಿಕಲ್: ಆಟಿಡೊಂಜಿ ದಿನ ಕಾರ್ಯಕ್ರಮ

Update: 2018-08-06 15:35 GMT

ಮಂಗಳೂರು, ಆ.6: ನಗರದ ಕೋಡಿಕಲ್ ಮಹಿಳಾ ಮಂಡಳಿ ಮತ್ತು ರಿಷಿ ಸಾಮಾಜಿಕ-ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ ಆಶ್ರಯದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಕೋಡಿಕಲ್‌ನಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಜಗದೀಶ್ ಪಡ್ಪು, ಜನಪದ ಸಂಸ್ಕೃತಿಯಿಂದ ದೇಶ ಸಮೃದ್ಧವಾಗಿದೆ. ನಮ್ಮ ನಾಡಿನ ಸಂಸ್ಕೃತಿಯ ಮೂಲಕ ದೇಶದ ಅಖಂಡತೆ ಉಳಿಸಬೇಕು. ತಲೆತಲಾಂತರದಿಂದ ಬಂದ ಸಂಪ್ರದಾಯ ಉಳಿಸಿ ಮುಂದಿನ ಪೀಳಿಗೆ ಉಳಿಸಿ ಬೆಳೆಸಬೇಕು. ಈ ನಿಟ್ಟಿನಲ್ಲಿ ರಿಷಿ ಸಾಂಸ್ಕೃತಿಕ ಪ್ರತಿಷ್ಠಾನ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಸಂಪನ್ಮೂಲ ವ್ಯಕ್ತಿ ತುಳುವೆರೆ ಜನಪದ ಕೂಟದ ಸಂಸ್ಥಾಪಕ ಹರೀಶ್ ಆಳ್ವ ಮಾತನಾಡಿ, ಹಿಂದಿನ ಕಾಲದ ಅವಿಭಕ್ತ ಕುಟುಂಬದಲ್ಲಿ ಖುಷಿ ಇತ್ತು. ಆದ್ರೆ ಈಗ ಆ ಸಂಭ್ರಮವಿಲ್ಲ. ಆಧುನಿಕ ಪ್ರಭಾವದಿಂದ ಸಂಬಂಧಗಳು ಕ್ಷೀಣವಾಗುತ್ತಿವೆ. ನಾವು ನಮ್ಮ ಆಹಾರ ಮತ್ತು ಆಚಾರ ಸಂಸ್ಕೃತಿ ಮುಂದುವರಿಸಬೇಕು. ಮಕ್ಕಳಿಗೆ ಜೀವನ ವಿಧಾನ ಕಲಿಸಿಕೊಡಬೇಕು ಎಂದರು.

ಕೋಡಿಕಲ್ ಮಹಿಳಾ ಮಂಡಳಿ ಅಧ್ಯಕ್ಷೆ ಪೂರ್ಣಿಮಾ ಜಗನ್ನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿದ್ದ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ, ಮಹಿಳಾ ಮಂಡಳಿಯ ಸಲಹೆಗಾರರಾದ ಗೋಪಾಲ ಕೋಟ್ಯಾನ್ ಶುಭ ಹಾರೈಸಿದರು. ರಿಷಿ ಪ್ರತಿಷ್ಠಾನದ ಅಧ್ಯಕ್ಷ ದಿವಾಕರ್ ಪದ್ಮುಂಜ ಸ್ವಾಗತಿಸಿದರು. ದೇವಿಕಾ ಸುಳ್ಯ ಕಾರ್ಯಕ್ರಮ ನಿರೂಪಿಸಿದರು. ಸುನೀತಾ ವಂದಿಸಿದರು.

ಸಿರಿ ಪಾಡ್ದನ: ಸಂದಿ ಪಾಡ್ದನ ಕಲಾವಿದೆ ಅಪ್ಪಿ ದೇವಾಡಿಗ ಅವರಿಂದ ಸಿರಿ ಪಾಡ್ದನ ಕಾರ್ಯಕ್ರಮ ಜರಗಿತು. ಇದೇ ಸಂದರ್ಭದಲ್ಲಿ ಅಪ್ಪಿ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ಮಂಡಳಿ ಸದಸ್ಯೆಯರು ಮನೆಯಲ್ಲಿ ತಾವೇ ತಯಾರಿಸಿದ ಸುಮಾರು 20ಕ್ಕೂ ಅಧಿಕ ಬಗೆಯ ಆಟಿ ತಿನಿಸುಗಳನ್ನು ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News