×
Ad

ಕೊಲೆ ಯತ್ನ; ಆರೋಪ : ಓರ್ವನ ಬಂಧನ

Update: 2018-08-06 21:27 IST

ಮಂಗಳೂರು, ಆ.6: ಕುತ್ತಾರ್ ರಿಕ್ಷಾ ಪಾರ್ಕ್‌ನಲ್ಲಿ ಕುಳಿತಿದ್ದ ಆಟೊ ಚಾಲಕರಿಬ್ಬರ ಮಧ್ಯೆ ವಾಗ್ವಾದ ನಡೆದು ಚಾಲಕನೋರ್ವನ ಮೇಲೆ ಆರೋಪಿಗಳಿಬ್ಬರು ಕೊಲೆಗೆ ಯತ್ನಿಸಿದ ಘಟನೆ ಸೋಮವಾರ ನಡೆದಿದೆ. ಆರೋಪಿಗಳ ಪೈಕಿ ಓರ್ವನನ್ನು ಬಂಧಿಸುವಲ್ಲಿ ಮಂಗಳೂರು ದಕ್ಷಿಣ ಎಸಿಪಿ ನೇತೃತ್ವದ ರೌಡಿ ನಿಗ್ರಹ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ.

ಕುತ್ತಾರ್ ಮದನಿ ನಗರದ ಮುಹಮ್ಮದ್ ಕಬೀರ್ ತಸ್ಲೀಂ ತಚ್ಚಿ (21) ಬಂಧಿತ ಆರೋಪಿ. ಆತನ ಸಂಬಂಧಿ, ಆಟೊ ಚಾಲಕ ಮುಹಮ್ಮದ್ ಅಲಿ ತಲೆಮರೆಸಿಕೊಂಡಿದ್ದಾನೆ. ಚಾಲಕ ಅಜಿತ್ ಹಲ್ಲೆಗೊಳಗಾದವರು.

ಉಳ್ಳಾಲ ಸಮೀಪದ ಕುತ್ತಾರ್ ರಿಕ್ಷಾಪಾರ್ಕ್‌ನಲ್ಲಿ ಆಟೊ ಚಾಲಕರಾದ ಅಜಿತ್ ಮತ್ತು ಮುಹಮ್ಮದ್ ಅಲಿ ನಡುವೆ ವಾಗ್ವಾದ ನಡೆದಿದೆ. ಆಟೊ ಚಾಲಕ ಅಜಿತ್ ಮೇಲೆ ಚಾಲಕ ಮುಹಮ್ಮದ್ ಅಲಿ ಮತ್ತು ಸೋದರ ಸಂಬಂಧಿ ಮುಹಮ್ಮದ್ ಕಬೀರ್ ತಸ್ಲೀಂ ತಚ್ಚಿ ಸೇರಿಕೊಂಡು ಕೊಲೆ ಮಾಡಲು ಯತ್ನಿಸಿದ್ದು, ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.

ಹಲವು ಪ್ರಕರಣ:
ಬಂಧಿತ ಆರೋಪಿ ಕಬೀರ್ ತಸ್ಲೀಂ ತಚ್ಚಿ ವಿರುದ್ಧ ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ 4 ಪ್ರಕರಣ ದಾಖಲಾಗಿದ್ದು, ಇದರಲ್ಲಿ ದರೋಡೆ ಯತ್ನ, ಕಳವು, ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ.

ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪಆಯುಕ್ತ ಹನುಮಂತರಾಯ, ಅಪರಾಧ ಮತ್ತು ಸಂಚಾರ ವಿಭಾಗದ ಪೊಲೀಸ್ ಉಪ ಆಯುಕ್ತೆ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತ ರಾಮರಾವ್ ಮತ್ತು ಉಳ್ಳಾಲ ಪೊಲೀಸ್ ಇನ್‌ಸ್ಪೆಕ್ಟರ್ ಗೋಪಿಕೃಷ್ಣ ಹಾಗೂ ರೌಡಿ ನಿಗ್ರಹ ದಳದ ಸಿಬ್ಬಂದಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮತ್ತೋರ್ವ ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News