×
Ad

ಸಿಪಿಎಂ ಕಾರ್ಯಕರ್ತನ ಹತ್ಯೆ ಪ್ರಕರಣ : ಸಂಘ ಪರಿವಾರದ ಇಬ್ಬರು ಕಾರ್ಯಕರ್ತರ ಬಂಧನ

Update: 2018-08-06 21:40 IST

ಕಾಸರಗೋಡು (ಉಪ್ಪಳ), ಆ.6: ಡಿವೈಎಫ್‌ಐ, ಸಿಪಿಎಂ ಕಾರ್ಯಕರ್ತ ಯುವಕನೋರ್ವನನ್ನು ನಾಲ್ವರ ತಂಡವೊಂದು ಇರಿದು ಕೊಲೆಗೈದ ಘಟನೆ ರವಿವಾರ ರಾತ್ರಿ 11 ಗಂಟೆ ಸುಮಾರಿಗೆ ಉಪ್ಪಳ ಸಮೀಪದ ಸೋಂಕಾಲ್ ಎಂಬಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಸಂಘ ಪರಿವಾರದ ಇಬ್ಬರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಸೋಂಕಾಲು ಪ್ರತಾಪ್ ನಗರ ನಿವಾಸಿ ಅಝೀಝ್ ಎಂಬವರ ಪುತ್ರ ಅಬೂಬಕರ್ ಸಿದ್ದೀಕ್(23) ಹತ್ಯೆಯಾದ ಯುವಕ. ಕೃತ್ಯಕ್ಕೆ ಸಂಬಂಧಪಟ್ಟಂತೆ ಸಂಘ ಪರಿವಾರದ ಕಾರ್ಯಕರ್ತರಾದ ಉಪ್ಪಳ ಪ್ರತಾಪ್ ನಗರದ ಅಶ್ವಿತ್ ಯಾನೆ ಅಚ್ಚು(28) ಮತ್ತು ಐಲ ಮೈದಾನದ ನಿವಾಸಿ ಕಾರ್ತಿಕ್(27) ಎಂಬವರನ್ನು ತನಿಖಾ ತಂಡ ಬಂಧಿಸಿದೆ.

ಅಬೂಬಕರ್ ಸಿದ್ದೀಕ್ ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಬೈಕಿನಲ್ಲಿ ಮನೆಗೆ ಬರುತ್ತಿದ್ದ ವೇಳೆ ಈ ಕೃತ್ಯ ಎಸಗಲಾಗಿದೆ. ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಸೋಂಕಾಲ್‌ನಲ್ಲಿ ಅಬೂಬಕರ್ ಸಿದ್ದೀಕ್‌ರ ಬೈಕನ್ನು ಅಡ್ಡಗಟ್ಟಿ ಮಾರಕಾಯುಧಗಳಿಂದ ದಾಳಿ ನಡೆಸಿದೆ. ಬೊಬ್ಬೆ ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ದುಷ್ಕರ್ಮಿಗಳು ತಾವು ಬಂದ ಬೈಕನ್ನು ತೊರೆದು ಪರಾರಿಯಾಗಿದ್ದಾರೆ. ತೀವ್ರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಿದ್ದೀಕ್‌ರನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ.

ಪ್ರಕರಣದ ತನಿಖೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಶ್ರೀನಿವಾಸ್‌ರ ಮೇಲುಸ್ತುವಾರಿಯಲ್ಲಿ ಕಾಸರಗೋಡು ಡಿವೈಎಸ್ಪಿ ವಿ.ಸುಕುಮಾರನ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದ್ದಾರೆ. ಕೃತ್ಯ ನಡೆದ ಸ್ಥಳದಲ್ಲಿ ದೊರೆತ ಎರಡು ಬೈಕ್‌ಗಳನ್ನು ಕೇಂದ್ರೀಕರಿಸಿ ತನಿಖೆ ನಡೆಸಿದ ತನಿಖಾ ತಂಡವು ಆರೋಪಿಗಳ ಸುಳಿವು ಪತ್ತೆ ಹಚ್ಚಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಈಗಾಗಲೇ ಬಂಧಿಸಿದ್ದು, ಉಳಿದವರಿಗಾಗಿ ಶೋಧ ಮುಂದುವರಿದಿದೆ.
ಬಂಧಿತ ಇಬ್ಬರನ್ನು ಎಸ್ಪಿ ಎ.ಶ್ರೀನಿವಾಸನ್, ಡಿವೈಎಸ್ಪಿ ಎಂ.ವಿ.ಸುಕುಮಾರನ್, ಸಿಐಗಳಾದ ಸಿಬಿ ಥೋಮಸ್, ಪ್ರೇಂಸದನ್ ನೇತೃತ್ವದ ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಘಟನಾ ಸ್ಥಳಕ್ಕೆ ಕರೆದೊಯ್ದು ಮಾಹಿತಿ ಕಲೆ ಹಾಕಿದ್ದಾರೆ. ಈ ಸಂದರ್ಭ ಕೃತ್ಯಕ್ಕೆ ಬಳಸಿದ ಮಾರಕಾಯುಧವನ್ನು ಘಟನಾ ಸ್ಥಳದ ಸಮೀಪ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.

ಉಪ್ಪಳ ಸೋಂಕಾಲ್‌ನಲ್ಲಿ ಕೊಲೆಗೀಡಾದ ಅಬೂಬಕರ್ ಸಿದ್ದೀಕ್‌ನ ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಜೆ ಉಪ್ಪಳ ಸೋಂಕಾಲ್‌ಗೆ ತರಲಾಯಿತು.
ದಾರಿ ಮಧ್ಯೆ ಕಾಲಿಕಡವು, ಚೆರ್ವತ್ತೂರು, ನೀಲೇಶ್ವರ, ಕಾಞಂಗಾಡ್, ಪಾಲಕುನ್ನು, ಕಾಸರ ಗೋಡು ಹೊಸ ಬಸ್ ನಿಲ್ದಾಣ, ಕುಂಬಳೆ, ಉಪ್ಪಳ ಮೊದಲಾದೆಡೆ ಅಂತಿಮ ದರ್ಶನಕ್ಕಿಡಲಾಯಿತು.

ಸಂಸದ ಪಿ.ಕರುಣಾಕರನ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ವಿ.ಬಾಲಕೃಷ್ಣನ್ ಮಾಸ್ಟರ್, ಮಾಜಿ ಸಚಿವ ಎಂ.ವಿ.ಜಯರಾಜನ್, ಮಾಜಿ ಶಾಸಕ ಸಿ.ಎಚ್. ಕುಞಂಬು, ಸಿಪಿಎಂ ಮಂಜೇಶ್ವರ ವಲಯ ಕಾರ್ಯದರ್ಶಿ ಅಬ್ದುರ್ರಝಾಕ್ ಚಿಪ್ಪಾರ್, ಕೆ.ಆರ್.ಜಯಾನಂದ ಮತ್ತಿತರರು ಅಂತಿಮ ದರ್ಶನ ಪಡೆದರು.
ಬಳಿಕ ಸಂಜೆ ಸೋಂಕಾಲ್ ಜುಮಾ ಮಸೀದಿ ವಠಾರದಲ್ಲಿ ದಫನ ಕಾರ್ಯ ನೆರವೇರಿತು.

ಅಕ್ರಮ ಮದ್ಯ ಮಾರಾಟದ ವಿರುದ್ಧ ಧ್ವನಿ ಜೀವಕ್ಕೆ ಮುಳುವಾಯಿತೇ?
ಕತರ್‌ನಲ್ಲಿ ಹೋಟೆಲ್ ಉದ್ಯೋಗಿಯಾಗಿದ್ದ ಸಿದ್ದೀಕ್ ಹತ್ತು ದಿನಗಳ ಹಿಂದೆ ಊರಿಗೆ ಬಂದಿದ್ದರು. ಈ ಸಂದರ್ಭ ಸೋಂಕಾಲು ಪರಿಸರದಲ್ಲಿ ನಡೆಯುತ್ತಿದ್ದ ಅಕ್ರಮ ಮದ್ಯ ಮಾರಾಟ ಮತ್ತು ಬಹಿರಂಗ ಮದ್ಯಪಾನ ವಿರುದ್ಧ ಸಿಪಿಎಂ ಹೋರಾಟ ನಡೆಸುತ್ತಿತ್ತು. ಈ ಬಗ್ಗೆ ಪೊಲೀಸ್ ದೂರು ಕೂಡಾ ನೀಡಲಾಗಿತ್ತು. ಈ ಹೋರಾಟದಲ್ಲಿ ಅಬೂಬಕರ್ ಸಿದ್ದೀಕ್ ಮುಂಚೂಣಿಯಲ್ಲಿದ್ದರೆನ್ನಲಾಗಿದೆ. ಇದೇ ದ್ವೇಷದಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇದರ ಹೊರತಾಗಿ ಹತ್ಯೆಗೆ ರಾಜಕೀಯ ಕಾರಣದ ಬಗ್ಗೆಯೂ ಪೊಲೀಸರು ಕೂಲಂಕುಷ ತನಿಖೆ ನಡೆಸುತ್ತಿದ್ದಾರೆ.

ಮಂಜೇಶ್ವರದಲ್ಲಿ ಹರತಾಳ
ಸಿಪಿಎಂ ಕಾರ್ಯಕರ್ತ ಅಬೂಬಕರ್ ಹತ್ಯೆಯನ್ನು ಖಂಡಿಸಿ ಸಿಪಿಎಂ ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಸೋಮವಾರ ಅಪರಾಹ್ನ 2ರಿಂದ ಸಂಜೆ 6 ಗಂಟೆ ತನಕ ಹರತಾಳಕ್ಕೆ ಕರೆ ನೀಡಿತ್ತು.
ಆದರೆ ಬೆಳಗ್ಗೆಯಿಂದಲೇ ಬಹುತೇಕ ರೂಟ್‌ಗಳಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಬಹುತೇಕ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗಿತ್ತು.
ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಶಿರಿಯದಲ್ಲಿ ಕರ್ನಾಟಕ ಕೆಎಸ್ಸಾರ್ಟಿಸಿ ಬಸ್ಸಿಗೆ ಕಲ್ಲೆಸೆಯಲಾಗಿದ್ದು ಪರಿಣಾಮ ಬಸ್ ಚಾಲಕ ರಂಗಪ್ಪ ಗಾಯಗೊಂಡಿದ್ದಾರೆ. ಖಾಸಗಿ ಬಸ್ಸೊಂದಕ್ಕೂ ಕಲ್ಲೆಸೆದ ಘಟನೆ ವರದಿಯಾಗಿದೆ.

ವಿಶೇಷ ತನಿಖಾ ತಂಡ ರಚನೆ: ಜಿಲ್ಲಾ ಎಸ್ಪಿ
ಹತ್ಯೆ ಪ್ರಕರಣ ಭೇದಿಸಲು ಕಾಸರಗೋಡು ಡಿವೈಎಸ್ಪಿ ವಿ. ಸುಕುಮಾರನ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಶ್ರೀನಿವಾಸ್ ತಿಳಿಸಿದ್ದಾರೆ.
ತನಿಖಾ ತಂಡದಲ್ಲಿ ಇಬ್ಬರು ಸರ್ಕಲ್ ಇನ್‌ಸ್ಪೆಕ್ಟರ್ ಸಹಿತ 20 ಮಂದಿಯಿದ್ದಾರೆ. ಹತ್ಯೆಗೆ ರಾಜಕೀಯ ದ್ವೇಷ ಅಥವಾ ಅದಕ್ಕೆ ಹೊರತಾದ ಕಾರಣಗಳಿವೆಯೇ ಎಂದು ಪರಿಶೀಲಿಸಲಾಗುತ್ತಿದೆ. ಪ್ರಕರಣದ ಎಲ್ಲಾ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಘಟನೆಯ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ವಿಶೇಷ ನಿಗಾ ವಹಿಸಿದ್ದು, ಕಟ್ಟೆಚ್ಚರ ವಹಿಸಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News