“ಸರಕಾರ ಮತ್ತು ಪೊಲೀಸರು ನಮ್ಮ ಜೊತೆಗಿದ್ದಾರೆ”

Update: 2018-08-07 05:49 GMT

ಹಾಪುರ್, ಆ.6: ಗೋರಕ್ಷಣೆಯ ಹೆಸರಿನಲ್ಲಿ ಅಮಾಯಕರನ್ನು ಕೊಲೆಗೈದವರೊಂದಿಗೆ ಎನ್ ಡಿಟಿವಿ ನಡೆಸಿರುವ ರಹಸ್ಯ ಕಾರ್ಯಾಚರಣೆ ಭಯಾನಕ ಸತ್ಯಗಳನ್ನು ಹೊರಗೆಡವಿದೆ.

ಆರೆಸ್ಸೆಸ್ ಹಾಗು ಇತರ ಸಂಘಪರಿವಾರ ಸಂಘಟನೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವವರು ಎಂದು ಹೇಳಿಕೊಂಡು ಎನ್ ಡಿಟಿವಿಯ ತಂಡ ಎರಡು ರಾಜ್ಯಗಳಲ್ಲಿ ನಡೆದ ಎರಡು ಗೋರಕ್ಷಣೆಯ ಹೆಸರಿನ ಹತ್ಯೆ ಪ್ರಕರಣಗಳ ಆರೋಪಿಗಳೊಂದಿಗೆ ಮಾತನಾಡಿದೆ. ಈ ಮಾತುಕತೆಯ ವಿಡಿಯೋವನ್ನು ರಹಸ್ಯ ಕ್ಯಾಮರಾದಲ್ಲಿ ಚಿತ್ರೀಕರಿಸಲಾಗಿದೆ.

ಜೂನ್ 18ರಂದು 45 ವರ್ಷದ ವರ್ತಕ ಕಾಸಿಂ ಖುರೇಷಿಯವರನ್ನು ಗೋರಕ್ಷಕರ ಗುಂಪೊಂದು ಥಳಿಸಿ ಹತ್ಯೆಗೈದಿತ್ತು. ಈ ಪ್ರಕರಣ ನಡೆದ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಗೆ ತಂಡವು ಮೊದಲು ಭೇಟಿ ನೀಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 9 ಮಂದಿಯನ್ನು ಬಂಧಿಸಿದ್ದು, 4 ಮಂದಿ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ. ಹಾಪುರ್ ಹತ್ಯೆ ಪ್ರಕರಣದ ಆರೋಪಿ ರಾಕೇಶ್ ಸಿಸೋಡಿಯಾನನ್ನು ಭೇಟಿಯಾಗಲು ಎನ್ ಡಿಟಿವಿ ಆರಂಭದಲ್ಲಿ ಬಜೇಧಾ ಖುರ್ದ್ ಗ್ರಾಮಕ್ಕೆ ತೆರಳಿತ್ತು. ಈತ ಇದೀಗ ಜಾಮೀನಿನಲ್ಲಿದ್ದಾನೆ.

ಈ ಪ್ರಕರಣದಲ್ಲಿ ತನ್ನದೇನೂ ಪಾತ್ರವಿಲ್ಲ ಹಾಗು ತಾನು ಸ್ಥಳದಲ್ಲಿರಲಿಲ್ಲ ಎಂದು ಸಿಸೋಡಿಯಾ ಕೋರ್ಟ್ ಲಿಖಿತ ರೂಪದಲ್ಲಿ ತಿಳಿಸಿದ್ದ. ಆದರೆ ರಹಸ್ಯ ಕ್ಯಾಮರಾದಲ್ಲಿ ಆತ ತನ್ನ ಅಪರಾಧ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ, ಕ್ರೌರ್ಯತೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಜೈಲು ಅಧಿಕಾರಿಗಳ ಮುಂದೆಯೇ ತಾನು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದೆ ಎಂದೂ ಆತ ಹೇಳಿದ್ದಾನೆ.

“ಅವರು (ಸಂತ್ರಸ್ತರು) ಗೋಹತ್ಯೆ ಮಾಡುತ್ತಿದ್ದರು. ಆದ್ದರಿಂದ ನಾನು ಅವರ ಹತ್ಯೆ ಮಾಡಿದೆ ಎಂದು ನಾನು ಜೈಲರ್ ಮುಂದೆ ಹೇಳಿದ್ದೇನೆ. ನಾನು ಜೈಲಿಗೆ ಹೋಗಲು ಹೆದರಿಲ್ಲ. ಯಾವ ಪ್ರಕರಣ ಎಂದು ಕೇಳಿದ್ದ ಜೈಲರ್ ಗೆ ನಾನು, ಸೆಕ್ಷನ್ 302 , 307 ಕೊಲೆ, ಕೊಲೆಯತ್ನ ಎಂದು ಹೇಳಿದ್ದೆ” ಎಂದು ಸಿಸೋಡಿಯಾ ಹೇಳಿರುವುದು ರಹಸ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಜುಲೈಯ ಕೊನೆಯ ವಾರದಲ್ಲಿ ತನಗೆ ಜಾಮೀನು ಲಭಿಸಿದಾಗ ಯಾವ ರೀತಿಯ ಸ್ವಾಗತ ಲಭಿಸಿತ್ತು ಎಂದೂ ಆತ ವಿವರಿಸಿದ್ದಾನೆ. ಜೈಲಿನಿಂದ ನನ್ನನ್ನು ಕರೆದೊಯ್ಯಲು 3-4 ವಾಹನಗಳು ಬಂದಿದ್ದವು. ನನ್ನ ಹೆಸರಿನಲ್ಲಿ ಜನರು ಘೋಷಣೆಗಳನ್ನು ಕೂಗುತ್ತಿದ್ದರು. ನನಗೆ ತುಂಬಾ ಹೆಮ್ಮೆ ಎನಿಸಿತು” ಎಂದು ಆತ ಹೇಳಿದ್ದಾನೆ.

“ನನ್ನ ಸೈನ್ಯ ತಯಾರಾಗಿದೆ. ಯಾರಾದರೂ ಗೋಹತ್ಯೆ ಮಾಡಿದರೆ, ನಾವು ಅವರನ್ನು ಕೊಂದು ಸಾವಿರ ಸಲ ಜೈಲಿಗೆ ಹೋಗುತ್ತೇವೆ. ಸರಕಾರದಿಂದಾಗಿ ಪೊಲೀಸರು ನಮ್ಮ ಜೊತೆಗಿದ್ದಾರೆ. ಅಝಂ ಖಾನ್ ಅಧಿಕಾರದಲ್ಲಿದ್ದಿದ್ದರೆ ಇದ್ಯಾವುದೂ ನಡೆಯುತ್ತಿರಲಿಲ್ಲ” ಎಂದು ಸಿಸೋಡಿಯಾ ಗೋರಕ್ಷಕರಿಗೆ ಪೊಲೀಸರ ಸಹಕಾರದ ಬಗ್ಗೆಯೂ ಒಪ್ಪಿಕೊಂಡಿದ್ದಾನೆ.

ಗೋರಕ್ಷಕರಿಂದ ಗಂಭೀರ ಹಲ್ಲೆಗೊಳಗಾಗಿದ್ದ ಕಾಸಿಂ ನೀರು ಕೇಳುತ್ತಿರುವುದು ಈ ಹಿಂದೆ ವೈರಲ್ ಆದ ವಿಡಿಯೋದಲ್ಲಿತ್ತು. ಈ ಘಟನೆಯನ್ನೂ ಸಿಸೋಡಿಯಾ ವಿವರಿಸುತ್ತಾನೆ. “ನಿನಗೆ ನೀರು ಕುಡಿಯುವ ಹಕ್ಕಿಲ್ಲ ಎಂದು ನಾನು ಹೇಳಿದೆ. ಅವನು ಗೋಹತ್ಯೆಗೈದಿದ್ದ. ಪ್ರತಿ ನಿಮಿಷವೂ ನಿನ್ನನ್ನು ಕೊಲ್ಲಲಾಗುವುದು ಎಂದು ನಾನು ಆತನಿಗೆ ಹೇಳಿದೆ” ಎಂದು ಕ್ರೌರ್ಯವನ್ನು ಹೆಮ್ಮೆಯಿಂದ ವಿವರಿಸುತ್ತಾನೆ ಸಿಸೋಡಿಯಾ.

ಇನ್ನೊಂದು ರಹಸ್ಯ ಕಾರ್ಯಾಚರಣೆಯಲ್ಲಿ ಎನ್ ಡಿಟಿವಿ ಜೈಪುರ ಸಮೀಪದ ಆಲ್ವಾರ್ ನ ಬೆಹ್ರೋರ್ ಗೆ ತೆರಳಿತ್ತು. 2017ರ ಎಪ್ರಿಲ್ ನಲ್ಲಿ ಪೆಹ್ಲು ಖಾನ್ ರನ್ನು ಇಲ್ಲೇ ಗೋರಕ್ಷಕರು ಹತ್ಯೆಗೈದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 9 ಮಂದಿಯನ್ನು ಬಂಧಿಸಿದ್ದರು. ಆದರೆ ಇವರು ಜಾಮೀನಿನಲ್ಲಿ ಬಿಡುಗಡೆಯಾಗಿದ್ದಾರೆ. ಬಂಧಿತ ಆರೋಪಿಗಳ ಪೈಕಿ ಒಬ್ಬಾತನಾದ ವಿಪಿನ್ ಯಾದವ್, ಹತ್ಯೆಯಲ್ಲಿ ತನ್ನ ಪಾತ್ರವಿಲ್ಲ ಎಂದು ಇತರ ಆರೋಪಿಗಳಂತೆಯೇ ಹೇಳಿಕೆ ನೀಡಿದ್ದ.

ತಾನೂ ಹತ್ಯೆಯಲ್ಲಿ ಶಾಮೀಲಾಗಿದ್ದೆ ಎಂದು ಈತ ಹೇಳಿರುವುದು ಕೂಡ ಎನ್ ಡಿಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ಸೆರೆಯಾಗಿದೆ. “ಸುಮಾರು 1.5 ಗಂಟೆಗಳ ಕಾಲ ನಾವು ಹಲ್ಲೆ ನಡೆಸಿದೆವು. ಮೊದಲು ನಾವು ಹತ್ತು ಜನರಿದ್ದೆವು. ನಂತರ ಜನರ ಸಂಖ್ಯೆ ಹೆಚ್ಚಿತು” ಎಂದು ಯಾದವ್ ಹೇಳಿದ್ದಾನೆ.

“ಅವರು ಟ್ರಕ್ ಗಳನ್ನು ನಿಲ್ಲಿಸಲಿಲ್ಲ. ಆದ್ದರಿಂದ ನಾನು ಓವರ್ ಟೇಕ್ ಮಾಡಿ ಬಲವಂತದಿಂದ ಕೀ ಕಸಿದುಕೊಂಡು ಅವರನ್ನು ಹೊರಗೆಳೆದೆ. ಆತ (ಪೆಹ್ಲು ಖಾನ್) ಗಂಭೀರವಾಗಿ ಗಾಯಗೊಂಡಿದ್ದ. ಈ ಗಲಾಟೆಯ ನಡುವೆ ಆತನ ಟ್ರಕ್ ಕೀ ನನ್ನ ಜೇಬಿನಲ್ಲಿದೆ ಎನ್ನುವುದನ್ನು ನಾನು ಮರೆತಿದ್ದೆ” ಎಂದು ಯಾದವ್ ಹೇಳಿರುವುದು ರಹಸ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.  

ಕೃಪೆ: ndtv.com

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News