×
Ad

ಮಲ್ಪೆ; ಹಣಕ್ಕಾಗಿ ಬಿಲ್ಡರ್‌ಗೆ ಬೆದರಿಕೆ ಕರೆ: ಇಬ್ಬರ ಬಂಧನ

Update: 2018-08-06 22:30 IST

ಮಲ್ಪೆ, ಆ.6: 25ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟು ಬಿಲ್ಡರ್‌ಗೆ ಬೆದರಿಕೆ ಕರೆ ಮಾಡುತ್ತಿದ್ದ ಇಬ್ಬರನ್ನು ಮಲ್ಪೆ ಪೊಲೀಸರು ಇಂದು ಸಂಜೆ ವೇಳೆ ಮಲ್ಪೆ ಬೀಚ್‌ನಲ್ಲಿ ಬಂಧಿಸಿದ್ದಾರೆ.

ಬಂಧಿತರನ್ನು ಕಟಪಾಡಿಯ ಧನರಾಜ್(23) ಹಾಗೂ ಮಲ್ಪೆಯ ಉಲ್ಲಾಸ್ (25) ಎಂದು ಗುರುತಿಸಲಾಗಿದೆ. ಇವರಿಂದ ಕಾರು ಹಾಗೂ ಆರು ಮೊಬೈಲ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇವರು ಅಂಬಾಗಿಲಿನ ಬಿಲ್ಡರ್ ಪ್ರಭಾಕರ ಪೂಜಾರಿ ಎಂಬವರಿಗೆ ಕಳೆದ ವಾರದಿಂದ ಮೊಬೈಲ್ ಕರೆ ಮಾಡಿ ಹಣ ನೀಡುವಂತೆ ಬೆದರಿಕೆಯೊಡ್ಡುತ್ತಿದ್ದರೆನ್ನಲಾಗಿದೆ. ಈ ಬಗ್ಗೆ ಪ್ರಭಾಕರ ಪೂಜಾರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇಂದು ಮತ್ತೆ ಕರೆ ಮಾಡಿದ ಆರೋಪಿಗಳು ವ್ಯವಹಾರದ ಬಗ್ಗೆ ಮಾತುಕತೆ ನಡೆಸಲು ಮಲ್ಪೆ ಬೀಚ್ ಬರುವಂತೆ ಪ್ರಭಾಕರ ಪೂಜಾರಿಗೆ ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಅಲರ್ಟ್ ಆದ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆಬೀಸಿದರು. ಬೀಚ್‌ಗೆ ಕಾರಿನಲ್ಲಿ ಬಂದಿದ್ದ ಆರೋಪಿಗಳು ಅಲ್ಲಿಂದ ಮತ್ತೆ ಪ್ರಭಾಕರ ಪೂಜಾರಿಗೆ ಕರೆ ಮಾಡಿ, ನೀವು ಬನ್ನಂಜೆ ರಾಜನ ಹೆಸರಿನಲ್ಲಿ ಹಣ ಮಾಡುತ್ತೀರಿ, ನಮಗೂ ಅದರಲ್ಲಿ 25ಲಕ್ಷ ರೂ. ಹಣ ಕೊಡಿ ಎಂದು ಬೆದರಿಕೆಯೊಡ್ಡಿದ್ದರೆನ್ನಲಾಗಿದೆ.

ಈ ವೇಳೆ ಆರೋಪಿಗಳ ಕಾರನ್ನು ಪತ್ತೆ ಹಚ್ಚಿದ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News