ರಾಜ್ಯದಲ್ಲಿರುವುದು ದಿನಗೂಲಿ ಸರಕಾರ: ಶಾಸಕ ಸಂಜೀವ ಮಠಂದೂರು

Update: 2018-08-06 17:42 GMT

ಮಂಗಳೂರು, ಆ.6: ರಾಜ್ಯದಲ್ಲಿ 80 ದಿನಗಳಿಂದ ಅಧಿಕಾರ ನಡೆಸುತ್ತಿರುವುದು ದಿನಗೂಲಿ ಸರಕಾರವಾಗಿದೆ. ಇದಕ್ಕೆ ಯಾವುದೇ ಸೇವಾ ಭದ್ರತೆಯಿಲ್ಲ. ಅಂತಹ ವಾತಾವರಣದಲ್ಲಿ ಸರಕಾರವಿದೆ ಎಂದು ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ. ಜಿಲ್ಲೆಯಲ್ಲಿ ಸೋಲನ್ನನುಭವಿಸಿದ ಘಟಾನುಘಟಿಗಳು ಸಂಸದರು ಹಾಗೂ ಬಿಜೆಪಿ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ.ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತಿರುವುದನ್ನು ಸಹಿಸದ ಕೆಲವು ರಾಜಕೀಯ ವಿರೋಧಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳ ಮೂಲಕ ಅಪಪ್ರಚಾರ ಮಾಡುತ್ತಿರುವುದು ಸಲ್ಲದು. ಜನತೆ ಹಾಗೂ ಕಾರ್ಯಕರ್ತರು ಸಂಸದರು ಮಾಡುತ್ತಿರುವ ಕೆಲಸಗಳನ್ನು ಗುರುತಿಸಿದ್ದು, ಅವರ ವಿರುದ್ಧ ಮಾಡುವ ಅಪಪ್ರಚಾರವನ್ನು ಜನ ನಂಬಲಾರರು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಮಾನವರಹಿತ ರೈಲ್ವೆ ಕ್ರಾಸಿಂಗ್ ತೆರವು, ಮೀನುಗಾರರಿಗೆ ತೆರವು, ಮಂಗಳೂರು ನಗರಕ್ಕೆ ಸ್ಮಾರ್ಟ್‌ಸಿಟಿ ಯೋಜನೆ, ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರಧನ ನೀಡಿಕೆ, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿ, ಜಿಲ್ಲೆ ಹೆಚ್ಚು ಜನರಿಗೆ ಮುದ್ರಾ ಯೋಜನೆ ಸಾಲ, ಉಜ್ವಲಾ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ನೀಡಿಕೆ, ಜನ್‌ಧನ್ ಯೋಜನೆಯಂತಹ ಕಾರ್ಯುಕ್ರಮಗಳ ಯಶಸ್ವಿಗೆ ಕಾರಣರಾಗಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಭರತ್ ಶೆಟ್ಟಿ, ಪ್ರತಾಪ್‌ಚಂದ್ರ ನಾಯಕ್, ಕಿಶೋರ್ ರೈ, ಸಂತೋಷ್‌ಕುಮಾರ್ ರೈ ಬೊಳಿಯಾರ್, ನಮಿತಾ ಶ್ಯಾಮ್, ರವಿಶಂಕರ್ ಮಿಜಾರು, ಪೂಜಾ ಪೈ, ಚಂದ್ರಹಾಸ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News