×
Ad

ಆ.10ರಂದು ‘ಕತ್ತಲಕೋಣೆ’ ರಾಜ್ಯಾದ್ಯಂತ ಬೆಳ್ಳಿತೆರೆಗೆ

Update: 2018-08-07 19:12 IST

ಉಡುಪಿ, ಆ.7: ಜಿಲ್ಲೆಯ ತರುಣರ ಹಾಗೂ ಯುವ ಪತ್ರಕರ್ತರ ಎರಡು ವರ್ಷಗಳ ಸತತ ಪರಿಶ್ರಮದಿಂದ ಸಿದ್ಧಗೊಂಡಿರುವ ತಸ್ಮಯ್ ಪ್ರೊಡಕ್ಷನ್‌ನ ಸೈಕಲಾಜಿಕಲ್ ಹಾರರ್ ಥ್ರಿಲ್ಲರ್ ಚಿತ್ರ ‘ಕತ್ತಲಕೋಣೆ’ ಆ.10ರ ಶುಕ್ರವಾರ ರಾಜ್ಯಾದ್ಯಂತ 120 ಥಿಯೇಟರ್‌ಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಪತ್ರಕರ್ತ ಹಾಗೂ ಚಿತ್ರದ ನಟ ಅಶ್ವಥ್ ಆಚಾರ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂದಾಪುರ ಮೂಲದ ಪತ್ರಕರ್ತರಾಗಿರುವ ಸಂದೇಶ್ ಶೆಟ್ಟಿ ಅಜ್ರಿ ಅವರು ತಾನೇ ಬರೆದ ಕಥೆಯನ್ನು ಚಲನಚಿತ್ರವಾಗಿಸಿದ್ದು, ನಿರ್ದೇಶನದೊಂದಿಗೆ ಚಿತ್ರದ ನಾಯಕನಾಗಿಯೂ ನಟಿಸಿದ್ದಾರೆ ಎಂದು ಅಶ್ವಥ್ ಆಚಾರ್ಯ ತಿಳಿಸಿದರು. ಪಿ.ಆರ್.ಅಮೀನ್ ಚಿತ್ರದ ನಿರ್ಮಾಪಕರಾದರೆ, ಶ್ರೀನಿವಾಸ ಶಿವಮೊಗ್ಗ ಸಹ ನಿರ್ಮಾಪಕರು.

ಚಿತ್ರದ ಸಂಪೂರ್ಣ ಚಿತ್ರೀಕರಣ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಚಿತ್ರದ ಶೇ.85ರಷ್ಟು ಚಿತ್ರೀಕರಣ ರಾತ್ರಿಯ ವೇಳೆಯಲ್ಲೇ ನಡೆದಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಇವುಗಳಲ್ಲಿ ಶಿವಮೊಗ್ಗದ ಮೆಹಬೂಬ್ ಸಾಬ್ ಹಾಡಿದ ‘ಒಂಟಿ ಕಾನನದಿ ನೀ’ ಗೀತೆ ಈಗಾಗಲೇ ಭಾರೀ ಜನಪ್ರಿಯತೆ ಪಡೆದಿವೆ ಎಂದವರು ನುಡಿದರು.

ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಮುಂಬಯಿಯ ಕನ್ನಡತಿ ಹೇನಿಕಾ ರಾವ್ ಅವರು ಸಂದೇಶ್ ಶೆಟ್ಟಿ ಅಜ್ರಿ ಎದುರು ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಎಂಟು ಮಂದಿ ಪತ್ರಕರ್ತರು ನಟಿಸಿದ್ದಾರೆ.ಆರ್.ಕೆ.ಮಂಗಳೂರು ಛಾಯಾಗ್ರಹಣ, ಜೀತ್ ಜೋಸೆಫ್ ಸಹ ನಿರ್ದೇಶಕರಾಗಿದ್ದಾರೆ. ಅರುಣ್‌ರಾಜ್ ಸಂಗೀತ, ಅಶೋಕ್ ನೀಲಾವರ ಮತ್ತು ನಾಗರಾಜ್ ರಾವ್ ಅವರ ಸಾಹಿತ್ಯವಿದೆ.

ಮುಖ್ಯ ಭೂಮಿಕೆಯಲ್ಲಿ ವೈಶಾಖ್ ಅಮೀನ್, ರತಿಕ್ ಮುರುಡೇಶ್ವರ, ರಘು ಪಾಂಡೇಶ್ವರ, ಸುನಿಲ್ ಉಪ್ಪುಂದ, ರೋಹಿತ್ ಅಂಪಾರು, ಚಿತ್ರಕಲಾ ರಾಜೇಶ್, ಶ್ರೀನಿವಾಸ ಪೈ, ಮಂಜುನಾಥ ಸಾಲಿಯಾನ್, ನಾಗರಾಜ್ ರಾವ್ ನಟಿಸಿದ್ದಾರೆ.

ಉಡುಪಿಯ ಅಲಂಕಾರ್, ಕುಂದಾಪುರದ ವಿನಾಯಕ್ ಹಾಗೂ ಬೈಂದೂರಿನ ಶಂಕರ್ ಚಿತ್ರಮಂದಿರ ಸೇರಿದಂತೆ ರಾಜ್ಯಾದ್ಯಂತ ಆ.10ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಅಶ್ವಥ್ ಆಚಾರ್ಯ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News