2.5 ಕೋಟಿ ತಲುಪಿದ ಆಸ್ಟ್ರೇಲಿಯ ಜನಸಂಖ್ಯೆ
ಸಿಡ್ನಿ, ಆ. 7: ಮಂಗಳವಾರ ಆಸ್ಟ್ರೇಲಿಯದ ಜನಸಂಖ್ಯೆ ದಾಖಲೆಯ 2.5 ಕೋಟಿಯನ್ನು ತಲುಪಿದೆ. ಆದರೆ, ಇದು ನಿರೀಕ್ಷೆಗಿಂತ 10 ವರ್ಷ ಮೊದಲೇ ಸಂಭವಿಸಿರುವುದು ಗಮನಾರ್ಹವಾಗಿದೆ.
ಆಸ್ಟ್ರೇಲಿಯಕ್ಕೆ ಪ್ರತಿ ವರ್ಷ ಲಕ್ಷಾಂತರ ವಲಸಿಗರು ಬರುತ್ತಿರುವ ಹಿನ್ನೆಲೆಯಲ್ಲಿ ದೇಶದ ಜನಸಂಖ್ಯೆಯಲ್ಲಿ ಅಗಾಧ ವೃದ್ಧಿಯಾಗಿದೆ ಎನ್ನುವುದನ್ನು ಸರಕಾರಿ ಅಂಕಿಸಂಖ್ಯೆಗಳು ತೋರಿಸಿವೆ.
ಪ್ರತಿ ನಿಮಿಷ ಓರ್ವ ವ್ಯಕ್ತಿ ಆಸ್ಟ್ರೇಲಿಯದಲ್ಲಿ ವಾಸಿಸಲು ಬರುತ್ತಾನೆ ಎಂದು ಅಂಕಿಸಂಖ್ಯೆಗಳು ಹೇಳುತ್ತವೆ. ಹಾಗಾಗಿ, ಮನೆಗಳು ಮತ್ತು ಕಾರುಗಳಿಂದ ಹಿಡಿದು ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದು ದೇಶದ ಆರ್ಥಿಕ ಪ್ರಗತಿಗೆ ಕಾರಣವಾಗಿದೆ.
ಈಗಿನ ಪ್ರವೃತ್ತಿಯಂತೆ, ಇನ್ನು 3 ವರ್ಷಗಳ ಅವಧಿಯಲ್ಲಿ ಆಸ್ಟ್ರೇಲಿಯದ ಜನಸಂಖ್ಯೆ 2.6 ಕೋಟಿಯನ್ನು ತಲುಪಲಿದೆ.
ವಲಸಿಗರ ಸಂಖ್ಯೆಯಲ್ಲಿನ ಕ್ಷಿಪ್ರ ಏರಿಕೆಯು, ವಲಸೆಯಿಂದ ಉಂಟಾಗುವ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳ ಕುರಿತ ಚರ್ಚೆಗೆ ಕಾರಣವಾಗಿದೆ. ಸೀಮಿತ ಮೂಲಭೂತ ಸೌಕರ್ಯಗಳಿಂದಾಗಿ ನಗರಗಳು ಕಿಷ್ಕಿಂದೆಯಾಗಿ ಪರಿಣಮಿಸಿವೆ ಹಾಗೂ ಕೆಲಸಕ್ಕೆ ಜನರು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿರುವುದರಿಂದ ವೇತನಗಳು ಹೆಚ್ಚುತ್ತಿಲ್ಲ.