ಇರಾನ್ ವಿರುದ್ಧದ ಮೊದಲ ಸುತ್ತಿನ ದಿಗ್ಬಂಧನ ಜಾರಿ
ವಾಶಿಂಗ್ಟನ್, ಆ. 7: ಇರಾನ್ ಜೊತೆಗಿನ ಪರಮಾಣು ಒಪ್ಪಂದದಿಂದ ಹಿಂದೆ ಸರಿದ ಬಳಿಕ, ಅಮೆರಿಕ ಸೋಮವಾರ ಆ ದೇಶದ ವಿರುದ್ಧ ಮೊದಲ ಸುತ್ತಿನ ವ್ಯಾಪಾ ದಿಗ್ಬಂಧನಗಳನ್ನು ಘೋಷಿಸಿದೆ.
2015ರ ಪರಮಾಣು ಒಪ್ಪಂದವನ್ನು ಮರುರೂಪಿಸುವಂತೆ ಇರಾನ್ ಮೇಲೆ ಒತ್ತಡ ಹೇರುವುದು ಈ ದಿಗ್ಬಂಧನದ ಉದ್ದೇಶವಾಗಿದೆ. ದಿಗ್ಬಂಧನವು ಮಂಗಳವಾರದಿಂದ ಜಾರಿಗೆ ಬಂದಿದೆ.
ಮೂಲ ಪರಮಾಣು ಒಪ್ಪಂದದಿಂದ ಮೇ ತಿಂಗಳಲ್ಲಿ ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ಹಿಂದೆ ಬಂದಿರುವುದನ್ನು ಸ್ಮರಿಸಬಹುದಾಗಿದೆ.
ಇರಾನ್‌ನ ವಾಹನ ಕ್ಷೇತ್ರ ಹಾಗೂ ಚಿನ್ನ ಮುಂತಾದ ಅಮೂಲ್ಯ ಲೋಹಗಳ ವ್ಯಾಪಾರಕ್ಕೆ ದಿಗ್ಬಂಧನ ಅನ್ವಯಿಸುತ್ತದೆ. ಅದೂ ಅಲ್ಲದೆ, ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಬಳಸುವ ಕರೆನ್ಸಿ ಅಮೆರಿಕ ಡಾಲರನ್ನು ಇರಾನ್ ಬಳಸುವುದನ್ನು ಈ ದಿಗ್ಬಂಧನ ನಿಷೇಧಿಸುತ್ತದೆ.
‘‘ಇರಾನ್ ಸರಕಾರದ ಮೇಲೆ ಗರಿಷ್ಠ ಆರ್ಥಿಕ ಒತ್ತಡವನ್ನು ಹೇರುವುದನ್ನು ನಾವು ಮುಂದುವರಿಸುತ್ತೇವೆ. ಅದೇ ವೇಳೆ, ಇರಾನ್‌ನ ಪ್ರಕ್ಷೇಪಕ ಕ್ಷಿಪಣಿ ಕಾರ್ಯಕ್ರಮ ಮತ್ತು ಭಯೋತ್ಪಾದನೆಗೆ ಅದು ನೀಡುತ್ತಿರುವ ಬೆಂಬಲ ಸೇರಿದಂತೆ ಅದರ ಆಕ್ಷೇಪಣೀಯ ಚಟುವಟಿಕೆಗಳನ್ನು ನಿಭಾಯಿಸುವ ಹೆಚ್ಚು ಸಮಗ್ರ ಒಪ್ಪಂದದ ಬಗ್ಗೆ ಮಾತುಕತೆ ನಡೆಸಲು ನಾನು ತೆರೆದ ಮನಸ್ಸು ಹೊಂದಿದ್ದೇನೆ. ಈ ಪ್ರಯತ್ನಗಳಲ್ಲಿ ಸಮಾನ ಮನಸ್ಕ ದೇಶಗಳೊಂದಿಗಿನ ಭಾಗೀದಾರಿಕೆಯನ್ನು ಅಮೆರಿಕ ಸ್ವಾಗತಿಸುತ್ತದೆ’’ ಎಂದು ದಿಗ್ಬಂಧನಗಳನ್ನು ಘೋಷಿಸುತ್ತಾ ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಮುಂದಿನ ಸುತ್ತಿನ ದಿಗ್ಬಂಧನಗಳು ನವೆಂಬರ್‌ನಲ್ಲಿ ಜಾರಿಗೆ ಬರಲಿವೆ. ಆ ದಿಗ್ಬಂಧನಗಳು ಇರಾನ್‌ನ ಬಂದರುಗಳು ಮತ್ತು ಕಚ್ಚಾತೈಲ ರಫ್ತುಗಳ ಮೇಲೆ ಹೊಡೆತ ನೀಡುತ್ತವೆ.
ಮಾತುಕತೆ ಪ್ರಸ್ತಾಪ ತಿರಸ್ಕರಿಸಿದ ಇರಾನ್
ಇರಾನ್ ವಿರುದ್ಧ ಮೊದಲ ಸುತ್ತಿನ ಆರ್ಥಿಕ ದಿಗ್ಬಂಧನಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಘೋಷಿಸಿದಂತೆಯೇ, 2015ರ ಪರಮಾಣು ಒಪ್ಪಂದವನ್ನು ಮರುರೂಪಿಸಲು ಅದು ನೀಡಿರುವ ಕರೆಯನ್ನು ಇರಾನ್ ತಿರಸ್ಕರಿಸಿದೆ.
ಒಪ್ಪಂದದಿಂದ ಅಮೆರಿಕ ಹೊರಬಂದ ಹೊರತಾಗಿಯೂ, ಒಪ್ಪಂದದ ಇತರ ಪಕ್ಷಗಳಾದ ರಶ್ಯ, ಜರ್ಮನಿ, ಬ್ರಿಟನ್, ಚೀನಾ ಮತ್ತು ಫ್ರಾನ್ಸ್‌ಗಳು ಒಪ್ಪಂದದಲ್ಲೇ ಮುಂದುವರಿದಿರುವುದನ್ನು ಸ್ಮರಿಸಬಹುದಾಗಿದೆ.
‘‘ನೀವೊಂದು ಶತ್ರುವಾಗಿದ್ದೀರಿ ಹಾಗೂ ನೀವು ಇನ್ನೊಬ್ಬ ವ್ಯಕ್ತಿಗೆ ಚೂರಿಯಿಂದ ಇರಿಯುತ್ತೀರಿ. ಆದರೆ, ನಂತರ ಮಾತುಕತೆಗೆ ಸಿದ್ಧ ಎಂದು ನೀವು ಹೇಳುತ್ತೀರಿ. ಹಾಗಾದರೆ, ನೀವು ಮೊದಲು ಚೂರಿಯನ್ನು ತೆಗೆಯಬೇಕಾಗುತ್ತದೆ’’ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಸರಕಾರಿ ಟೆಲಿವಿಶನ್‌ನಲ್ಲಿ ಹೇಳಿದ್ದಾರೆ.
‘‘ಅವರು ಇರಾನ್ ದೇಶದ ವಿರುದ್ಧ ಮಾನಸಿಕ ಯುದ್ಧ ನಡೆಸಲು ಹೊರಟಿದ್ದಾರೆ. ದಿಗ್ಬಂಧನಗಳು ಜಾರಿಯಲ್ಲಿರುವಾಗ ಮಾತುಕತೆ ಸರಿಯಾಗುವುದಿಲ್ಲ’’ ಎಂದು ಅವರು ಹೇಳಿದ್ದಾರೆ.