×
Ad

ಹಫ್ತಾಕ್ಕಾಗಿ ಬಿಲ್ಡರ್ರ್‌ಗೆ ಕೊಲೆ ಬೆದರಿಕೆ: ಆರೋಪಿಗಳು ಪೊಲೀಸ್ ಕಸ್ಟಡಿಗೆ

Update: 2018-08-07 20:29 IST

ಮಲ್ಪೆ, ಆ.7: ಉಡುಪಿ ಅಂಬಾಗಿಲಿನ ಕ್ಲಾಸಿಕ್ ಬಿಲ್ಡರ್ಸ್‌ನ ಪ್ರಭಾಕರ ಪೂಜಾರಿ ಎಂಬವರಿಗೆ 25ಲಕ್ಷ ರೂ. ಹಫ್ತಾ ನೀಡುವಂತೆ ಕೊಲೆ ಬೆದರಿಕೆಯೊಡ್ಡಿ ಬಂಧಿತರಾಗಿರುವ ಕಟಪಾಡಿ ಏಣಗುಡ್ಡೆಯ ಧನು ಯಾನೆ ಧನರಾಜ್(25) ಹಾಗೂ ಮಲ್ಪೆಯ ಉಲ್ಲಾಸ್(27) ಎಂಬವರನ್ನು ಉಡುಪಿ ನ್ಯಾಯಾಲಯವು ಆ.10ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಭೂ ವ್ಯವಹಾರ ಹಾಗೂ ಬಿಲ್ಡಿಂಗ್ ಕನ್‌ಸ್ಟ್ರಕ್ಷನ್ ಮಾಡಿಕೊಂಡಿದ್ದ ಪ್ರಭಾಕರ ಪೂಜಾರಿಗೆ ಕಳೆದ ಒಂದು ವಾರದಿಂದ ಅನಾಮಧೇಯ ಕರೆಗಳು ಬರುತ್ತಿದ್ದು, ಆರೋಪಿಗಳು ಆ. 6ರಂದು ಮಧ್ಯಾಹ್ನ 2ಗಂಟೆಗೆ ಮಲ್ಪೆ ಬೀಚ್‌ಗೆ ಬರುವಂತೆ ಕರೆ ಮಾಡಿದ್ದರು. ಈ ಬಗ್ಗೆ ಪ್ರಭಾಕರ ಪೂಜಾರಿ ಪೊಲೀಸರಿಗೆ ಮಾಹಿತಿ ನೀಡಿ, ತನ್ನ ಕಾರಿನಲ್ಲಿ ಮಲ್ಪೆ ಬೀಚ್‌ಗೆ ಹೋಗಿದ್ದರು.

ಅಲ್ಲಿ ರಿಟ್ಜ್ ಕಾರಿನಲ್ಲಿ ಬಂದ ಧನ್‌ರಾಜ್ ಹಾಗೂ ಉಲ್ಲಾಸ್, ನಾವು ಬನ್ನಂಜೆ ರಾಜನ ಸಹಚರರು ಎಂದು ಹೇಳಿಕೊಂಡು ಪ್ರಭಾಕರ್ ಪೂಜಾರಿಗೆ ಮೊಬೈಲ್ ಕೊಟ್ಟು ಮಾತನಾಡುವಂತೆ ತಿಳಿಸಿದ್ದರು. ಮೊಬೈಲ್‌ನಲ್ಲಿ ವಿಕ್ಕಿ ಪೂಜಾರಿ ಎಂದು ಹೇಳಿಕೊಂಡು ಮಾತನಾಡಿದ ವ್ಯಕ್ತಿಯು, 25ಲಕ್ಷ ರೂ. ಹಣ ನೀಡಬೇಕು, ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಪ್ರಭಾಕರ್ ಪೂಜಾರಿಗೆ ಬೆದರಿಕೆಯೊಡ್ಡಿದ್ದನು. ಈ ವೇಳೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.

25ಲಕ್ಷ ಹಫ್ತಾ ವಸೂಲಿಗೆ ಬೇಡಿಕೆ ಇಟ್ಟು, ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿರುವುದಾಗಿ ಉಲ್ಲಾಸ್, ಧನರಾಜ್ ಹಾಗೂ ವಿಕ್ಕಿ ಪೂಜಾರಿ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಗಳನ್ನು ಇಂದು ಬೆಳಗ್ಗೆ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿ ರುವ ಮಲ್ಪೆ ಪೊಲೀಸರು, ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ಕೊಂಡು ತನಿಖೆ ಮುಂದುವರೆಸಿದ್ದಾರೆ.

ಜೈಲಿನಲ್ಲಿದ್ದೆ ಹಫ್ತಾಕ್ಕಾಗಿ ಬೆದರಿಕೆ?
ಮಂಗಳೂರು ತೊಕ್ಕೊಟ್ಟು ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಬೆಂಗಳೂರು ಜೈಲಿನಲ್ಲಿರುವ ರೌಡಿ ವಿಕ್ಕಿ ಪೂಜಾರಿ, ಜೈಲಿನಲ್ಲಿದ್ದುಕೊಂಡೇ ಬಿಲ್ಡರ್ ಪ್ರಭಾಕರ ಪೂಜಾರಿಗೆ ಹಫ್ತಾ ನೀಡುವಂತೆ ಬೆದರಿಕೆಯೊಡ್ಡಿದ್ದಾನೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಆ.6ರಂದು ವಿಕ್ಕಿ ಪೂಜಾರಿ ಎಂದು ಹೇಳಿಕೊಂಡು ಪ್ರಭಾಕರ ಪೂಜಾರಿ ಜೊತೆ ಮೊಬೈಲ್‌ನಲ್ಲಿ ಮಾತನಾಡಿದ ವ್ಯಕ್ತಿ 25ಲಕ್ಷ ರೂ. ಹಫ್ತಾ ನೀಡುವಂತೆ ಬೆದರಿಕೆಯೊಡ್ಡಿದ್ದ ಎಂದು ದೂರಲಾಗಿದೆ. ಪ್ರಭಾಕರ ಪೂಜಾರಿ ಜೊತೆ ಮೊಬೈಲ್‌ನಲ್ಲಿ ಮಾತನಾಡಿದ ವ್ಯಕ್ತಿ, ಈಗ ಜೈಲಿನಲ್ಲಿರುವ ವಿಕ್ಕಿ ಪೂಜಾರಿಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಹೆಚ್ಚಿನ ತನಿಖೆಗಾಗಿ ಬಂಧಿತರಿಬ್ಬ ರನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದು, ವಿಚಾರಣೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News