ಪಾಂಬೂರು: ನಾಡಿಗೆ ಬಂದ ಗಂಡು ಚಿರತೆ ಬೋನಿನಲ್ಲಿ ಸೆರೆ

Update: 2018-08-07 15:12 GMT

ಶಿರ್ವ, ಆ.7: ಪಡುಬೆಳ್ಳೆ ಗ್ರಾಮದ ಪಾಂಬೂರು ಪರಿಸರದಲ್ಲಿ ಕಳೆದ ಹಲವು ದಿನಗಳಿಂದ ತಿರುಗಾಡುತ್ತ ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆಯೊಂದು ಸೋಮವಾರ ರಾತ್ರಿ ಪಾಂಬೂರಿನ ಜಾರ್ಜ್ ಫ್ಲೋರಿನ್ ಸಲ್ದಾನ ಎಂಬವರ ಮನೆಯ ಸಮೀಪದ ಖಾಸಗಿ ಹಾಡಿಯಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿ ನಲ್ಲಿ ಸೆರೆಯಾಗಿದೆ.

ಕಳೆದ ಕೆಲ ದಿನಗಳಿಂದ ಈ ಪರಿಸರದಲ್ಲಿ ಎರಡು ಚಿರತೆಗಳು ಸ್ಥಳೀಯರಿಗೆ ಕಾಣ ಸಿಕ್ಕಿದ್ದು, ಇಲ್ಲಿನ ಸಾಕು ನಾಯಿಯೊಂದನ್ನು ಚಿರತೆ ಕೊಂಡೊಯ್ದಿದ್ದನ್ನು ಸ್ಥಳೀಯರು ನೋಡಿದ್ದರೆನ್ನಲಾಗಿದೆ. ಆ. 6ರಂದು ಬೆಳಗ್ಗೆ ಚಿರತೆಯ ಘರ್ಜನೆ ಕೇಳಿದ್ದ ಜಾರ್ಜ್ ಫ್ಲೋರಿನ್ ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ದ್ದರು. ಕೂಡಲೇ ಕಾರ್ಯ ಪ್ರವೃತ್ತರಾದ ಅರಣ್ಯ ಇಲಾಖೆಯವರು ಸೋಮ ವಾರ ಸಂಜೆ ವೇಳೆ ಅಲ್ಲೇ ಸಮೀಪದ ಹಾಡಿಯಲ್ಲಿ ಬೋನಿನೊಳಗೆ ನಾಯಿ ಯೊಂದನ್ನು ಕೂಡಿ ಹಾಕಿ ಚಿರತೆಯ ಸೆರೆಗೆ ಬಲೆ ಬೀಸಿದ್ದರು.

ರಾತ್ರಿ ವೇಳೆ ನಾಯಿಯ ಬೇಟೆಗಾಗಿ ಬೋನಿನೊಳಗೆ ನುಗ್ಗಿದ ಚಿರತೆ ಅದ ರೊಳಗೆ ಬಂಧಿಯಾಯಿತು. ಮಂಗಳವಾರ ಬೆಳಗ್ಗೆ ಚಿರತೆ ಘರ್ಜನೆ ಕೇಳಿ ಫ್ಲೋರೀನ್ ಹಾಡಿಯೊಳಗೆ ಹೋಗಿ ನೋಡಿದಾಗ ಚಿರತೆ ಬೋನಿನೊಳಗೆ ಬಂಧಿಯಾಗಿರುವುದು ಕಂಡುಬಂತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯವರು ಬೋನು ಸಹಿತ ಚಿರತೆಯನ್ನು ಸಾರ್ವಜನಿಕರ ಸಹಕಾರ ದಿಂದ ಕೊಂಡೊಯ್ದರು.

ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಪರ್ಡ್ ಲೋಬೋ ನಿರ್ದೇಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ದಯಾನಂದ ಮಾರ್ಗದರ್ಶನದಲ್ಲಿ ಬೆಳ್ಳೆ ಗಸ್ತು ಅರಣ್ಯ ರಕ್ಷಕ ಗಣಪತಿ ನಾಯಕ್, ಇಲಾಖಾ ಸಿಬ್ಬಂದಿ ಪರಶುರಾಮ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

‘ಸದ್ಯ ಸೆರೆ ಸಿಕ್ಕಿರುವ ಚಿರತೆ ಸುಮಾರು 8 ವರ್ಷ ಪ್ರಾಯದ ಗಂಡು ಚಿರತೆ ಯಾಗಿದೆ. ಸ್ಥಳಿಯರಿಗೆ ಇಲ್ಲಿ ಎರಡು ಚಿರತೆಗಳು ಕಾಣ ಸಿಕ್ಕಿದೆಯಂತೆ. ಇನ್ನೊಂದು ಹೆಣ್ಣು ಚಿರತೆ ಆಗಿರಬಹುದು. ಆ ಚಿರತೆಯನ್ನು ಹಿಡಿಯಲು ಸದ್ಯದಲ್ಲೇ ಬೋನು ಇರಿಸಲಾಗುವುದು’ ಎಂದು ಬೆಳ್ಳೆ ಗಸ್ತು ಅರಣ್ಯ ರಕ್ಷಕ ಗಣಪತಿ ನಾಯಕ್ ತಿಳಿಸಿದ್ದಾರೆ.

ಚಿರತೆ ನೋಡಿ ಸಂಭ್ರಮಿಸಿದ ವಿದ್ಯಾರ್ಥಿಗಳು

ಚಿರತೆ ಸಿಕ್ಕಿರುವ ಮಾಹಿತಿ ಪರಿಸರದಲ್ಲಿ ಹರಡುತ್ತಿದ್ದಂತೆ ಈ ಪ್ರದೇಶದ ಶಾಲಾ ಶಿಕ್ಷಕರು ಮತ್ತು ಸ್ಥಳೀಯರು ಶಾಲಾ ವಠಾರಕ್ಕೆ ಚಿರತೆ ತಂದು ಮಕ್ಕಳ ಮುಂದೆ ಪ್ರದರ್ಶಿಸುವಂತೆ ಮನವಿ ಮಾಡಿದರು.

ಅದಕ್ಕೆ ಸ್ಪಂದಿಸಿದ ಇಲಾಖೆಯವರು ಪಾಂಬೂರು ಮಾನಸ ವಿಶೇಷ ಮಕ್ಕಳ ಶಾಲೆ ಮತ್ತು ನಾರಾಯಣಗುರು ಕನ್ನಡ ಮತ್ತು ಆಂಗ್ಲ ಮಾಧ್ಯಮದ ಶಾಲಾ ಮಕ್ಕಳಿಗೆ ಚಿರತೆಯನ್ನು ಪ್ರದರ್ಶಿಸಿದರು. ಮಕ್ಕಳು ಚಿರತೆಯನ್ನು ಕಂಡು ಸಂಭ್ರ ಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News