‘ಟ್ರೀ ಪಾರ್ಕ್‌ನಲ್ಲಿ ಸಾರ್ವಜನಿಕರಿಗೆ ಸೌಲಭ್ಯ ಒದಗಿಸಲು ಕ್ರಮ’

Update: 2018-08-07 15:16 GMT

ಉಡುಪಿ, ಆ.7: ಉಡುಪಿ ಹೊರ ವಲಯದ ಬಡಗಬೆಟ್ಟುನಲ್ಲಿ ನಿರ್ಮಿಸಲಾ ಗಿರುವ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನ (ಟ್ರೀ ಪಾರ್ಕ್)ನಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿ, ಸಾರ್ವಜನಿಕರನ್ನು ಆಕರ್ಷಿಸುವಂತೆ ಸಸ್ಯೋದ್ಯಾನವನ್ನು ಅಭಿವೃದ್ದಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕುಂದಾಪುರ ವಿಭಾಗ ಉಪಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ತಿಳಿಸಿದ್ದಾರೆ.

ಮಂಗಳವಾರ ಟ್ರೀ ಪಾರ್ಕ್‌ನಲ್ಲಿ ನಡೆದ ಸಸ್ಯೋದ್ಯಾನ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಟ್ರೀ ಪಾರ್ಕ್‌ಗೆ ಆಗಮಿಸುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕ್ಯಾಂಟೀನ್‌ನ್ನು ಪ್ರಾರಂಭಿಸುವಂತೆ ಸೂಚಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಟ್ರೀ ಪಾರ್ಕ್ ವೀಕ್ಷಿಸಲು ಆಗಮಿಸುವ ಸಾರ್ವಜನಿಕರಿಂದ ಸಂಗ್ರಹಿಸುವ ಪ್ರವೇಶ ಶುಲ್ಕವನ್ನು ಪ್ರತ್ಯೇಕ ಬ್ಯಾಂಕ್ ಖಾತೆ ತೆರೆದು ಜಮೆ ಮಾಡುವಂತೆ ಮತ್ತು ಆ ಶುಲ್ಕವನ್ನು ಟ್ರೀ ಪಾರ್ಕ್‌ನ ಅಭಿವೃದ್ದಿ ಕಾಮಗಾರಿಗೆ ಬಳಸಿಕೊಳ್ಳುವಂತೆ ಸೂಚಿಸಿದರು.

ಟ್ರೀ ಪಾರ್ಕ್‌ನಲ್ಲಿರುವ ವಿವಿಧ ಜಾತಿಯ ಮರಗಳ ವೈವಿಧ್ಯತೆ ಕುರಿತು ಆಯಾ ಮರದ ಸಮೀಪ ಮಾಹಿತಿ ಅಳವಡಿಸುವಂತೆ ಹಾಗೂ ಶಾಲಾ ಮಕ್ಕಳು ಟ್ರೀ ಪಾರ್ಕ್‌ಗೆ ಭೇಟಿ ನೀಡಿ ಅರಣ್ಯದ ಕುರಿತು ಮಾಹಿತಿ ಪಡೆಯಲು ಅನುಕೂಲವಾಗುವಂತೆ ವಿದ್ಯಾಂಗ ಇಲಾಖೆಯ ಉಪ ನಿರ್ದೇಶಕರ ಮೂಲಕ ಎಲ್ಲಾ ಶಾಲೆಗಳಿಗೆ ಮಾಹಿತಿ ಕಳಿಸಲು ಹಾಗೂ ಟ್ರೀ ಪಾರ್ಕ್‌ನಲ್ಲಿ ಸಮಾರಂಭ ಏರ್ಪಡಿಸುವವರಿಂದ ನಿಗದಿತ ಶುಲ್ಕ ಪಡೆಯುವಂತೆ ಹಾಗೂ ಟ್ರೀ ಪಾರ್ಕ್ ವೀಕ್ಷಣೆಗೆ ಬೆಳಗ್ಗೆ 10ರಿಂದ ಸಂಜೆ 6:30ರವರೆಗೆ ಸಮಯ ನಿಗದಿಪಡಿಸುವಂತೆ ಪ್ರಭಾಕರನ್ ತಿಳಿಸಿದರು.

ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನವು ಜಿಲ್ಲೆಯ ಪ್ರಥಮ ಟ್ರೀ ಪಾರ್ಕ್ ಆಗಿದ್ದು, 3 ತಿಂಗಳ ಹಿಂದೆ ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಪ್ರಸ್ತುತ ಟ್ರೀ ಪಾರ್ಕ್‌ನ ಪ್ರವೇಶ ಶುಲ್ಕ ವಯಸ್ಕರಿಗೆ ರೂ.10 ಹಾಗೂ ಮಕ್ಕಳಿಗೆ ರೂ.5 ಇದ್ದು, ಪ್ರತಿ ತಿಂಗಳು 50,000 ರೂ. ಶುಲ್ಕ ಸಂಗ್ರಹವಾಗುತ್ತಿದ್ದು, ಇದುವರೆಗೆ ಇಲ್ಲಿ 1.60 ಲಕ್ಷ ರೂ. ಸಂಗ್ರಹವಾಗಿದೆ ಎಂದು ಟ್ರೀ ಪಾರ್ಕ್ ನಿರ್ವಹಣಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೊ ಮಾಹಿತಿ ನೀಡಿದರು.

ಸಭೆಯಲ್ಲಿ, ಹಿರೇಬೆಟ್ಟು ಗ್ರಾಪಂ ಅಧ್ಯಕ್ಷೆ ಪ್ರಮೀಳಾ ಶೆಟ್ಟಿಗಾರ್, ಕುಂದಾಪುರ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಚ್ಚಪ್ಪ, ಉಡುಪಿ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆರ್.ಜಿ. ಭಟ್, ತೋಟಗಾರಿಕಾ ಇಲಾಖೆಯ ಅಧಿಕಾರಿ ಗುರುಪ್ರಸಾದ್, ಎಸ್‌ಡಿಎಂ ಆರ್ಯುವೇದ ಕಾಲೇಜಿನ ಎಸೋಸಿಯೇಟ್ ಪ್ರೊಪೆಸರ್ ಡಾ. ಚೈತ್ರಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News