×
Ad

ಪ್ರವಾಸೋದ್ಯಮದ ಆಕರ್ಷಣೆ ‘ತೇಲುವ ಜೆಟ್ಟಿ, ಉಪಹಾರ ಗೃಹ’

Update: 2018-08-07 20:54 IST

ಉಡುಪಿ, ಆ.7: ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಇನ್ನಷ್ಟು ಆಕರ್ಷಕ ಗೊಳಿಸುವ ನಿಟ್ಟಿನಲ್ಲಿ ತೇಲುವ ಜೆಟ್ಟಿ ಹಾಗೂ ತೇಲುವ ಉಪಹಾರ ಗೃಹಗಳ ನಿರ್ಮಾಣ ಸಂಬಂಧ ಅಂದಾಜು ಪಟ್ಟಿ ಹಾಗೂ ಸಮಗ್ರ ವರದಿಯೊಂದನ್ನು ತಯಾರಿಸುವಂತೆ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಸೂಚಿಸಿದ್ದಾರೆ.

ಮಂಗಳವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕರಾವಳಿ ಕರ್ನಾಟಕ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಕರಾವಳಿ ಪ್ರವಾಸಿ ಸ್ಥಳಗಳ ಅಭಿವೃದ್ಧಿಯ ಬಗ್ಗೆ ವಿವಿಧ ಪ್ರವಾಸೋದ್ಯಮ ಪರಿಣತರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಕರ್ನಾಟಕ ಸರಕಾರ ಈಗಾಗಲೇ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ತಯಾರಿಸಲು ಸಮಾಲೋಚಕರನ್ನು ನೇಮಿಸಿದೆ. ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾದ ತಾಣಗಳನ್ನು ಮತ್ತು ವಿವಿಧ ಕ್ಷೇತ್ರಗಳನ್ನು ಗುರುತಿಸಿ ಅವುಗಳನ್ನು ಅಭಿವೃದ್ಧಿ ಪಡಿಸುವ ಯೋಜನೆ ಮತ್ತು ಜಾರಿಗೆ ಈ ಸಮಾಲೋಚಕ ಸಂಸ್ಥೆಯು ಮಾಸ್ಟರ್ ಪ್ಲಾನ್ ಸಿದ್ಧಗೊಳಿಸಲಿದೆ ಎಂದವರು ತಿಳಿಸಿದರು.

ಸಮುದ್ರ ಕಿನಾರೆ ಮತ್ತು ನದಿ ಕಿನಾರೆಯಲ್ಲಿ ತೇಲುವ ಜೆಟ್ಟಿಗಳು ವಿದೇಶಗಳಲ್ಲಿ ಬಹಳಷ್ಟು ಆಕರ್ಷಣೆ ಪಡೆದಿವೆ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ 6 ಸ್ಥಳಗಳಲ್ಲಿ ತೇಲುವ ಜೆಟ್ಟಿ ನಿರ್ಮಿಸುವ ಬಗ್ಗೆ ಚಿಂತಿಸಲಾಗಿದೆ. ಇದಲ್ಲದೇ ಮಲ್ಪೆಯ ಸೈಂಟ್ ಮೇರಿ ದ್ವೀಪದಲ್ಲೂ ಜೆಟ್ಟಿ ನಿರ್ಮಿಸುವ ಉದ್ದೇಶವಿದೆ. ಇದೇ ರೀತಿ ತೇಲುವ ಉಪಹಾರಗೃಹಗಳು ಪ್ರವಾಸೋದ್ಯಮ ಆಕರ್ಷಿಸಲು ನೆರವಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ತೇಲುವ ಜೆಟ್ಟಿ ಹಾಗೂ ತೇಲುವ ಉಪಹಾರ ಗೃಹ ನಿರ್ಮಿಸುವ ಸಂಬಂಧ ಅಂದಾಜುಪಟ್ಟಿ ತಯಾರಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಪಡುಬಿದ್ರೆ ಮತ್ತು ತ್ರಾಸಿಯಲ್ಲಿ ಪ್ರವಾಸೋದ್ಯಮ ನೆರವು ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇದಲ್ಲದೇ, ಇನ್ನೂ ಕೆಲವು ಸ್ಥಳಗಳಲ್ಲಿ ಇಂತಹ ಕೇಂದ್ರ ಸ್ಥಾಪಿಸುವ ಬಗ್ಗೆ ಪರಿಶೀಲಿಸಲಾಗುವುದು. ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಅನುಮತಿಗಳನ್ನು ಏಕಗವಾಕ್ಷಿ ಕೇಂದ್ರದ ಮೂಲಕ ನೀಡಲು ಚಿಂತಿಸಲಾಗಿದೆ ಎಂದು ಅವರು ಹೇಳಿದರು

ಮಲ್ಪೆ ಸೈಂಟ್ ಮೇರಿ ದ್ವೀಪದ ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ಅಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಿದರೆ ದಂಡ ವಿಧಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಸಭೆಯಲ್ಲಿ ಜಿಲ್ಲೆಯ ವಿವಿಧ ಪ್ರವಾಸಿ ಕ್ಷೇತ್ರಗಳ ತಜ್ಞರು, ಉದ್ಯಮಿಗಳು, ಹೋಟೆಲ್ ಮುಖ್ಯಸ್ಥರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News