ಆ. 22ರಂದು ಈದುಲ್ ಅಝ್ ಹಾ ಸಾಧ್ಯತೆ
Update: 2018-08-07 21:12 IST
ಅಬುಧಾಬಿ, ಆ. 7: ಖಗೋಳ ಲೆಕ್ಕಾಚಾರಗಳ ಪ್ರಕಾರ, ಈದುಲ್ ಅಝ್ ಹಾ (ಬಕ್ರೀದ್) ಹಬ್ಬವು ಆಗಸ್ಟ್ 22 ಬುಧವಾರ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಶಾರ್ಜಾ ಬಾಹ್ಯಾಕಾಶ ಮತ್ತು ಖಗೋಳಶಾಸ್ತ್ರ ಕೇಂದ್ರದ ಉಪ ನಿರ್ದೇಶಕ ಇಬ್ರಾಹೀಂ ಅಲ್ ಜರ್ವಾನ್ ಹೇಳಿದ್ದಾರೆ.
ದುಲ್ ಹಜ್ ಚಂದ್ರ ಆಗಸ್ಟ್ 11ರಂದು ಯುಎಇ ಸಮಯ ಮಧ್ಯಾಹ್ನ 1:58ಕ್ಕೆ ಹುಟ್ಟುತ್ತದೆ ಎಂದು ಅವರು ಟಿವಿ ಚಾನೆಲೊಂದಕ್ಕೆ ನೀಡಿದ ಹೇಳಿಕೆಯೊಂದರಲ್ಲಿ ಹೇಳಿದ್ದಾರೆ.
‘‘ಸೂರ್ಯಾಸ್ತದ ಸಮಯದಲ್ಲಿ ಚಂದ್ರ ಸೂರ್ಯನಿಂದ ಒಂದು ಡಿಗ್ರಿ ಅಂತರದಲ್ಲಿರುತ್ತದೆ ಹಾಗೂ ಸೂರ್ಯಾಸ್ತದ 10 ನಿಮಿಷಗಳ ಬಳಿಕ ಅದು ಅಸ್ತಮಿಸುತ್ತದೆ. ಹಾಗಾಗಿ, ಆ ದಿನ ಚಂದ್ರನನ್ನು ಕಾಣಲು ಸಾಧ್ಯವಿಲ್ಲ. ಹಾಗಾಗಿ ರವಿವಾರವು 30ನೇ ದಿನವಾಗಿರುತ್ತದೆ ಹಾಗೂ ಸೋಮವಾರ ದುಲ್ ಹಜ್ ದ ಮೊದಲ ದಿನವಾಗಿರುತ್ತದೆ.
‘‘ಹಾಗಾಗಿ, ಈದುಲ್ ಅಝ್ ಹಾ ಮೊದಲ ದಿನ ಆಗಸ್ಟ್ 22 ಆಗಿರುತ್ತದೆ’’ ಎಂದು ಅವರು ಹೇಳಿದರು.