ಜಾತಿ ಪದ್ಧತಿ ವಿರುದ್ಧ ಸಿಡಿದೆದ್ದ ರ‍್ಯಾಪರ್ ಸುಮಿತ್

Update: 2018-08-07 17:35 GMT

ಹೊಸದಿಲ್ಲಿ, ಆ.7:  ಅಮೆರಿಕಾದಲ್ಲಿ ಒಂದು ಕಾಲದಲ್ಲಿ ಜನಾಂಗೀಯ ತಾರತಮ್ಯವನ್ನು ವಿರೋಧಿಸಿ ಹಿಪ್-ಹಾಪ್ ಸಂಗೀತದ ಸಂಸ್ಕೃತಿ ಹುಟ್ಟಿಕೊಂಡಿತ್ತು. ಈ ಹಿಪ್ ಹಾಪ್ ಸಂಗೀತ ಅಂದಿನಿಂದ ದನಿಯಿಲ್ಲದವರ ದನಿಯಾಗಿ ಬಿಟ್ಟಿದೆ. ಭಾರತದಲ್ಲೂ ಹಲವಾರು ಹಿಪ್ ಹಾಪ್ ಸಂಗೀತಗಾರರಿದ್ದರೂ ಸಾಮಾಜಿಕ ಸಮಸ್ಯೆಗಳತ್ತ ತಮ್ಮ ಸಂಗೀತದ ಮೂಲಕ ಬೆಳಕು ಚೆಲ್ಲುವ ಪ್ರಯತ್ನವನ್ನು ಅವರು ಮಾಡಿಲ್ಲ.

ಜೆಎನ್‍ಯು ವಿದ್ಯಾರ್ಥಿ ಸುಮಿತ್ ಸಮೋಸ್(24)  ಒಡಿಶಾದ ತೆಂತುಲಿಪಡರ್ ಗ್ರಾಮದ ನಿವಾಸಿ. ಇತ್ತೀಚೆಗೆ ಅವರು ತಮ್ಮ  ಮೊತ್ತ ಮೊದಲನೇ ಹಿಪ್ ಹಾಪ್ ಹಾಡು `ಲಡಾಯಿ ಸೀಖ್ ಲೇ"  ಬಿಡುಗಡೆಗೊಳಿಸಿದ್ದು ಇದು ಭಾರತದಲ್ಲಿ ಜಾತಿ ಆಧರಿತ ತಾರತಮ್ಯದತ್ತ ಬೆಳಕು ಚೆಲ್ಲಿದೆ. ಈ ಸಂಗೀತ ವೀಡಿಯೋದ ಅರಂಭವನ್ನು ಸುಮೀತ್ ತಮ್ಮದೇ ಅನುಭವದ ಆಧಾರದಲ್ಲಿ ಮಾಡಿದ್ದು ದಲಿತರು ಎದುರಿಸುವ ತಾರತಮ್ಯವನ್ನು ಅವರು ಈ ಸಂಗೀತ ವೀಡಿಯೋ ಮೂಲಕ ವಿವರಿಸಿದ್ದಾರೆ.

ಹಿಂದಿಯಲ್ಲಿ ಬರೆಯಲಾದ ಈ ಹಾಡು ಮೇಲ್ಜಾತಿಯವರಿಗೆ ಹಲವಾರು ಪ್ರಶ್ನೆಗಳನ್ನು ಕೇಳುವುದದಲ್ಲದೆ ದಲಿತರು ವಿರೋಧಿಸುವುದನ್ನು ಕಲಿಯಬೇಕೆಂದು ತಿಳಿಸುತ್ತದೆ.

ಸ್ಪ್ಯಾನಿಶ್ ಮತ್ತು ಲ್ಯಾಟಿನ್ ಅಮೆರಿಕನ್ ಸಾಹಿತ್ಯದಲ್ಲಿ ಸ್ನಾತ್ತಕೋತ್ತರ ಪದವೀಧರರಾಗಿರುವ ಸುಮಿತ್  ತಮ್ಮನ್ನು ಜಾತಿ ವಿರೋಧಿ ವಿದ್ಯಾರ್ಥಿ ಹೋರಾಟಗಾರನೆಂದು ಕರೆಸಿಕೊಳ್ಳಲು ಬಯಸುತ್ತಾರೆ. ಅವರು ಜೆಎನ್‍ಯು ಕ್ಯಾಂಪಸ್ಸಿನಲ್ಲಿ ಅಂಬೇಡ್ಕರ್ ವಾದಿ ಆಂದೋಲನದಲ್ಲಿ ಕಾಣಿಸಿಕೊಂಡವರು. ದಲಿತ ಸಮುದಾಯದಲ್ಲಿ “ಹುಟ್ಟಿದ್ದಕ್ಕೆ ನಮಗೆ ಹೆಮ್ಮೆಯೂ ಇಲ್ಲ. ನಾಚಿಕೆಯೂ ಇಲ್ಲ. ಇದು ನಮ್ಮ ಇತಿಹಾಸದ ಗುರುತಿನ ಭಾಗವಾಗಿದೆ” ಎಂದು ಅವರು ಹೇಳುತ್ತಾರೆ.

ಸುಮಿತ್ ಅವರು ಜೋಯ್ನರ್ ಲುಕಸ್, ಚೈಲ್ಡಿಶ್ ಗ್ಯಾಂಬಿನೊ, ಕೆಂಡ್ರಿಕ್ ಲಮರ್  ಮುಂತಾದವರಿಂದ ಪ್ರಭಾವಿತರಾದವರು. ತಮ್ಮ ಪ್ರಥಮ ಸಂಗೀತ ವೀಡಿಯೋದಲ್ಲಿ ಸುಮೀತ್ ಅವರು ಜೆಎನ್‍ಯು ಕ್ಯಾಂಪಸ್ಸಿನಲ್ಲಿ ತಾವು ಎದುರಿಸಿದ ತಾರತಮ್ಯ, ಪರೀಕ್ಷೆಯಲ್ಲಿ ಉತ್ತಮ ಅಂಕಗಳು ದೊರೆತ ಹೊರತಾಗಿಯೂ ವಿದ್ಯಾರ್ಥಿವೇತನ ನಿರಾಕರಣೆಯ ಬಗ್ಗೆ ವಿವರಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News