×
Ad

ಠೇವಣಿ ಅಕ್ರಮ ವರ್ಗಾವಣೆ ಪ್ರಕರಣ: ಆರೋಪಿಗೆ ನಿರೀಕ್ಷಣಾ ಜಾಮೀನು

Update: 2018-08-07 22:17 IST

ಮಂಗಳೂರು, ಆ.7: ನಗರದ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಕುಳಾಯಿ ಶಾಖೆಯಲ್ಲಿ ಸರಕಾರಿ ಸಾಮ್ಯದ ಕೆಆರ್‌ಐಡಿಎಲ್ ಸಂಸ್ಥೆಯಿರಿಸಿದ್ದ 55 ಕೋಟಿ ರೂ. ಠೇವಣಿ ಅಕ್ರಮ ವರ್ಗಾವಣೆ ಮಾಡಿದ ಪ್ರಕರಣದ ಆರೋಪಿಯೊಬ್ಬನಿಗೆ ನಗರದ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿ ಆದೇಶಿಸಿದೆ.

ಪಶ್ಚಿಮ ಬಂಗಾಳದ ಮನುಬೋಳ ನಿರೀಕ್ಷಣಾ ಜಾಮೀನು ಪಡೆದ ಆರೋಪಿ. ಕೆಆರ್‌ಐಡಿಎಲ್ ಸಂಸ್ಥೆಯು ಓವರ್‌ಸೀಸ್ ಬ್ಯಾಂಕ್‌ನಲ್ಲಿ 55 ಕೋಟಿ ರೂ.ನ್ನು ಠೇವಣಿಯಿರಿಸಿದ್ದು, ಬ್ಯಾಂಕ್‌ನ ಮ್ಯಾನೇಜರ್‌ಗಳಾದ ಶೆರಿನ್ ಮಧುಸೂದನ್, ಸೆಂಥಿಲ್ ಕುಮಾರ್ ಎಂಬವರು ಅದೇ ಬ್ಯಾಂಕ್‌ನಲ್ಲಿ ನಕಲಿ ಚಾಲ್ತಿ ಖಾತೆ ಸೃಷ್ಟಿಸಿ, ಹಣ ವರ್ಗಾವಣೆ ಮಾಡಿದ್ದರು. ತದನಂತರ ಸದ್ರಿ ಖಾತೆಯಿಂದ ನಾನಾ ಬೇನಾಮಿ ಖಾತೆಗಳಿಗೆ ವರ್ಗಾವಣೆ ಮಾಡಿದ್ದು, ಈ ಬಗ್ಗೆ ಕೆಆರ್‌ಐಡಿಎಲ್‌ನ ಅಧಿಕಾರಿ ಸುರತ್ಕಲ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ಹಲವು ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಪ್ರಕರಣದ ಗಂಭೀರತೆ ಅರಿತ ಸರಕಾರ ಕೇಸನ್ನು ಸಿಐಡಿಗೆ ವರ್ಗಾಯಿಸಿತ್ತು. ಈ ಪ್ರಕರಣದಲ್ಲಿ ಮನುಬೋಳ ಎಂಬಾತನನ್ನು ಕೂಡ ಸಿಐಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದರು. 

ಆರೋಪಿ ಮನುಬೋಳ ತನ್ನ ಮೇಲೆ ಪೊಲೀಸರು ಸುಳ್ಳು ಕೇಸು ದಾಖಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿ ಜಿಲ್ಲಾ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದನು. ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ಆ.6ರಂದು ನಿರೀಕ್ಷಣಾ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಆರೋಪಿ ಪರವಾಗಿ ನ್ಯಾಯವಾದಿ ಮನೋಹರ ವಿಟ್ಲ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News