ಎನ್ನಾರೈಗಳು ಆರ್‌ಟಿಐ ಅರ್ಜಿ ಸಲ್ಲಿಸುವಂತಿಲ್ಲ: ಸರಕಾರ

Update: 2018-08-08 15:30 GMT

ಹೊಸದಿಲ್ಲಿ,ಆ.8: ಅನಿವಾಸಿ ಭಾರತೀಯ(ಎನ್ನಾರೈ)ರು ಕೇಂದ್ರ ಸರಕಾರದ ಇಲಾಖೆಗಳಿಂದ ಸರಕಾರಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿಗಳನ್ನು ಸಲ್ಲಿಸುವಂತಿಲ್ಲ ಎಂದು ಸರಕಾರವು ಬುಧವಾರ ಲೋಕಸಭೆಯಲ್ಲಿ ತಿಳಿಸಿದೆ.

ಭಾರತೀಯ ಪ್ರಜೆಗಳು ಮಾತ್ರ ಆರ್‌ಟಿಐ ಕಾಯ್ದೆಯಡಿ ಮಾಹಿತಿಗಳನ್ನು ಕೋರುವ ಹಕ್ಕು ಹೊಂದಿದ್ದಾರೆ. ಅನಿವಾಸಿ ಭಾರತೀಯರು ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಲು ಅರ್ಹರಾಗಿಲ್ಲ ಎಂದು ಸಹಾಯಕ ಸಿಬ್ಬಂದಿ ಸಚಿವ ಜಿತೇಂದ್ರ ಸಿಂಗ್ ಅವರು ಲಿಖಿತ ಉತ್ತರದಲ್ಲಿ ತಿಳಿಸಿದರು.

ಪ್ರಸಕ್ತ 2,200 ಸಾರ್ವಜನಿಕ ಪ್ರಾಧಿಕಾರಗಳು ಆನ್‌ಲೈನ್‌ನಲ್ಲಿ ಆರ್‌ಟಿಐ ಅರ್ಜಿಗಳನ್ನು ಸ್ವೀಕರಿಸುವ,ಸಂಸ್ಕರಿಸುವ ಮತ್ತು ಉತ್ತರಿಸುವ ವ್ಯವಸ್ಥೆಯನ್ನು ಹೊಂದಿವೆ. ಅರ್ಜಿದಾರರು ಸಂಬಂಧಿಸಿದ ಪೋರ್ಟಲ್‌ಗೆ ಭೇಟಿ ನೀಡಿ ಕೇಂದ್ರ ಸರಕಾರದ ಯಾವುದೇ ಸಚಿವಾಲಯ ಅಥವಾ ಇಲಾಖೆಯನ್ನು ಆಯ್ಕೆ ಮಾಡಿಕೊಂಡು ಆನ್‌ಲೈನ್ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಗಳ ಸಲ್ಲಿಕೆಗೆ ನೆರವಾಗಲು ಸೂಕ್ತ ಮಾಹಿತಿಗಳನ್ನು ಪೋರ್ಟಲ್‌ನಲ್ಲಿ ಲಭ್ಯವಾಗಿಸಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News