ನಿನ್ನನ್ನು ಕೊಲ್ಲುತ್ತೇನೆ ಎಂದು ಮಿಥುನ್ ರೈ ಬೆದರಿಕೆ ಹಾಕಿದರು: ಪುನೀತ್ ಶೆಟ್ಟಿ ಆರೋಪ

Update: 2018-08-09 13:36 GMT

ಮಂಗಳೂರು, ಆ.9: ನಗರದಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ‘ಕ್ವಿಟ್ ಇಂಡಿಯಾ’ ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಬೆಂಬಲಿಗರು ತನ್ನ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು 'ಇಂಟಕ್' ನಾಯಕ ಪುನೀತ್ ಶೆಟ್ಟಿ ಆರೋಪಿಸಿದರು.

ಪುರಭವನದಲ್ಲಿ ಇಂದು ನಡೆದ ಕಾರ್ಯಕ್ರಮದ ಅಂತ್ಯದಲ್ಲಿ ಹೈಡ್ರಾಮ ನಡೆಯಿತು. ನಾಯಕರ ಮುಂದೆಯೇ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ‘ವಾರ್ತಾ ಭಾರತಿ’ ಪುನೀತ್ ಶೆಟ್ಟಿಯವರನ್ನು ಸಂಪರ್ಕಿಸಿ ಮಾತನಾಡಿದೆ.

“ಕ್ವಿಟ್ ಇಂಡಿಯಾ ಕಾರ್ಯಕ್ರಮದ ನಂತರ ಮಿಥುನ್ ರೈ ಮತ್ತು ಆತನ ಬೆಂಬಲಿಗರು ನನ್ನ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಸುಮಾರು 15 ಮಂದಿಯ ತಂಡ ಹಲ್ಲೆ ನಡೆಸಿದೆ. ಮಿಥುನ್ ರೈ ನನಗೆ ಜೀವ ಬೆದರಿಕೆಯೊಡ್ಡಿದ್ದಾನೆ. ಇದು ಹಲ್ಲೆ ಮಾತ್ರ, ಮುಂದಿನ ದಿನಗಳಲ್ಲಿ ನಿನ್ನನ್ನು ಕೊಲ್ಲುತ್ತೇನೆ ಎಂದು ಆತ ಬೆದರಿಕೆ ಹಾಕಿದ್ದಾನೆ” ಎಂದು ಪುನೀತ್ ಶೆಟ್ಟಿ ಆರೋಪಿಸಿದ್ದಾರೆ.

“ಈ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಆತನ ತಂಡ ನನ್ನ ಮೇಲೆ ಹಲ್ಲೆಗೆ ಯತ್ನಿಸಿತ್ತು. ಆದರೆ ಅವಕಾಶ ತಪ್ಪಿದ್ದರಿಂದ ಈ ದಿನ ಏಕಾಏಕಿ ಹಲ್ಲೆ ನಡೆಸಲಾಗಿದೆ. ಖುದ್ದಾಗಿ ಮಿಥುನ್ ರೈ ನನ್ನ ಬಳಿ ಬಂದು ‘ನೀನು ಯೂತ್ ಕಾಂಗ್ರೆಸ್ ಆಕಾಂಕ್ಷಿಯಾಗಿದ್ದು, ಅದರಿಂದ ಹಿಂದೆ ಸರಿಯದಿದ್ದಲ್ಲಿ ನಿನ್ನನ್ನು ಕೊಲ್ಲುತ್ತೇನೆ’ ಎಂದು ಬೆದರಿಕೆಯೊಡ್ಡಿದ್ದಾನೆ” ಎಂದವರು ಆರೋಪಿಸಿದರು.

'ಜಲೀಲ್ ಕರೋಪಾಡಿಯಂತೆ ಕೊಲ್ಲಲಾಗುವುದು ಎಂದು ಬೆದರಿಕೆ ಹಾಕಲಾಗಿತ್ತು' ಎನ್ನುವ ವದಂತಿಗಳ ಬಗ್ಗೆ ‘ವಾರ್ತಾ ಭಾರತಿ’ ಪ್ರಶ್ನಿಸಿದ್ದು, ಇದಕ್ಕೆ ಉತ್ತರಿಸಿದ ಪುನೀತ್ ಶೆಟ್ಟಿ, “ಜಲೀಲ್ ಕರೋಪಾಡಿನ ಕೊಲೆ ಯಾನೇ ಮನ್ಪಾದಿನಿ (ನಾನೇ ಮಾಡಿದ್ದು) ಎಂದು ಮಿಥುನ್ ರೈ ಹೇಳುತ್ತಿದ್ದ. ಅದೇ ರೀತಿ ನಿನ್ನನ್ನು ಕೊಲ್ಲಿಸುತ್ತೇನೆ ಎಂದು ಮಿಥುನ್ ರೈ, ಆತನ ಜೊತೆಗಿರುವ ಅವಿನಾಶ್, ಚೇತನ್ ಮೊದಲಾದವರು ಹೇಳಿದ್ದಾರೆ” ಎಂದು ಆರೋಪಿಸಿದರು.

“ಯೂತ್ ಕಾಂಗ್ರೆಸ್ ಆಕಾಂಕ್ಷಿಯಾಗಿರುವುದು ಆತನಿಗೆ ಹಿಡಿಸುತ್ತಿಲ್ಲ. ಐವನ್ ಡಿಸೋಜರ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸುತ್ತಿದ್ದೇನೆ. ಅವನಿಗೆ ಅದು ಹಿಡಿಸುತ್ತಿಲ್ಲ. ಮಿಥುನ್ ರೈ ಮೇಲೆ ಹಿಂದೆಯೂ ಗೂಂಡಾಗಿರಿ ಕೇಸ್ ಗಳಿವೆ. ಆದರೂ ಆತನಿಗೆ ಗನ್ ಮ್ಯಾನ್ ಕೊಟ್ಟಿದ್ದಾರೆ. ವೆಪನ್ ಕೊಟ್ಟಿದ್ದಾರೆ. ಆತ ನನಗೆ ಡಿಕೆಶಿವಕುಮಾರ್ ಇದ್ದಾರೆ ಎಂದು ಡಿಕೆ ಶಿವಕುಮಾರ್ ಹೆಸರನ್ನು ದುರುಪಯೋಗಪಡಿಸುತ್ತಿದ್ದಾನೆ. ಕಾಂಗ್ರೆಸ್ ಕಾರ್ಯಕರ್ತನೇ ಕಾಂಗ್ರೆಸ್ ಕಾರ್ಯಕರ್ತನಿಗೆ ಹಲ್ಲೆ ನಡೆಸುವುದು ಮುಂದುವರಿದರೆ ಸಮಾಜದಲ್ಲಿ ಪಕ್ಷದ ಕಾರ್ಯಕ್ರಮ ನಡೆಸಲು ಕಷ್ಟ ಸಾಧ್ಯವಾಗಬಹುದು” ಎಂದು ಪುನೀತ್ ಶೆಟ್ಟಿ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News