ತ್ರಿವಳಿ ತಲಾಖ್: ಜಾಮೀನಿಗೆ ಅವಕಾಶ ನೀಡುವ ಪ್ರಸ್ತಾಪಕ್ಕೆ ಸಂಪುಟದ ಅಸ್ತು

Update: 2018-08-09 15:02 GMT

ಹೊಸದಿಲ್ಲಿ, ಆ.9: ತಮ್ಮ ಪತ್ನಿಯರಿಗೆ ತ್ರಿವಳಿ ತಲಾಖ್ ನೀಡುವ ಪುರುಷರಿಗೆ ಜಾಮೀನಿಗೆ ಅವಕಾಶ ನೀಡುವ ಪ್ರಸ್ತಾಪಕ್ಕೆ ಕೇಂದ್ರ ಸಂಪುಟವು ಗುರುವಾರ ಹಸಿರು ನಿಶಾನೆಯನ್ನು ತೋರಿಸಿದೆ ಎಂದು ಮೂಲಗಳು ತಿಳಿಸಿವೆ. ಇದೊಂದು ಜಾಮೀನು ರಹಿತ ಅಪರಾಧವಾಗಿಯೇ ಮುಂದುವರಿದಿದೆಯಾದರೂ,ಈ ಪ್ರಸ್ತಾಪವು ಆರೋಪಿಗೆ ಜಾಮೀನು ಮಂಜೂರು ಮಾಡುವ ಅಧಿಕಾರವನ್ನು ದಂಡಾಧಿಕಾರಿಗಳಿಗೆ ನೀಡುತ್ತದೆ.

ಮುಸ್ಲಿಂ ಸಮುದಾಯದ ಪುರುಷರು ತಮ್ಮ ಪತ್ನಿಯರಿಗೆ ತ್ರಿವಳಿ ತಲಾಖ್‌ ನ ಮೂಲಕ ವಿಚ್ಛೇದನವನ್ನು ನೀಡುವ ಪದ್ಧತಿಯನ್ನು ನಿರ್ಮೂಲಿಸಲು ತ್ರಿವಳಿ ತಲಾಖ್ ಮಸೂದೆಯು ಉದ್ದೇಶಿಸಿದೆ.

ಮುಸ್ಲಿಂ ಮಹಿಳೆಯರ(ಹಕ್ಕುಗಳ ರಕ್ಷಣೆ) ವಿವಾಹ ಮಸೂದೆಯು ಲೋಕಸಭೆಯಲ್ಲಿ ಕಳೆದ ವರ್ಷವೇ ಅಂಗೀಕಾರಗೊಂಡಿದೆಯಾದರೂ ರಾಜ್ಯಸಭೆಯಲ್ಲಿ ಸರಕಾರಕ್ಕೆ ಸದಸ್ಯರ ಕೊರತೆಯಿರುವುದರಿಂದ ಹಿನ್ನಡೆಯಾಗಿದೆ. ಆರೋಪಿಗೆ ಜಾಮೀನಿಗೆ ಅವಕಾಶವಿರಬೇಕು ಎನ್ನುವುದು ಪ್ರತಿಪಕ್ಷಗಳ ಬೇಡಿಕೆಗಳಲ್ಲೊಂದಾಗಿತ್ತು. ಗುರುವಾರ ಅನುಮೋದಿಸಲಾಗಿರುವ ತಿದ್ದುಪಡಿಗಳಡಿ ಜಾಮೀನು ಮಂಜೂರು ಮಾಡುವ ಅಧಿಕಾರವನ್ನು ದಂಡಾಧಿಕಾರಿಗಳಿಗೆ ನೀಡಲಾಗುತ್ತದೆ ಎಂದು ಸರಕಾರದಲ್ಲಿನ ಮೂಲಗಳು ತಿಳಿಸಿದವು.

ಉದ್ದೇಶಿತ ಕಾನೂನು ತ್ರಿವಳಿ ತಲಾಖ್‌ಗೆ ಮಾತ್ರ ಅನ್ವಯವಾಗುತ್ತದೆ ಮತ್ತು ಸಂತ್ರಸ್ತ ಮಹಿಳೆಯು ತನಗೆ ಹಾಗೂ ತನ್ನ ಅಪ್ರಾಪ್ತ ವಯಸ್ಕ ಮಕ್ಕಳಿಗೆ ಜೀವನಾಂಶವನ್ನು ಕೋರಿ ದಂಡಾಧಿಕಾರಿಗಳ ಮೊರೆ ಹೋಗಲು ಅವಕಾಶ ನೀಡುತ್ತದೆ.

ಉದ್ದೇಶಿತ ಮಸೂದೆಯಡಿ ಒಂದರ ಹಿಂದೊಂದರಂತೆ ಮೂರು ಬಾರಿ ತಲಾಖ್ ಶಬ್ದವನ್ನು ಉಚ್ಚರಿಸಿ ತನ್ನ ಪತ್ನಿಗೆ ವಿಚ್ಛೇದನ ನೀಡುವ ಮುಸ್ಲಿಂ ಪುರುಷನಿಗೆ ಮೂರು ವರ್ಷಗಳ ಜೈಲುಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News