‘ಜಾಣ ಹಜ್’ ಕಾರ್ಯಕ್ರಮಕ್ಕೆ ಚಾಲನೆ

Update: 2018-08-09 15:01 GMT

ಜಿದ್ದಾ, ಆ. 9: ಮಕ್ಕಾ ಗವರ್ನರ್ ರಾಜಕುಮಾರ ಖಾಲಿದ್ ಅಲ್-ಫೈಝಲ್ ಬುಧವಾರ ‘ಜಾಣ ಹಜ್’ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಉಪಕ್ರಮವನ್ನು ತೆಗೆದುಕೊಂಡಿದೆ.

ಹಜ್ ಯಾತ್ರೆಯ ವೇಳೆ ಯಾತ್ರಿಕರಿಗೆ ಅತ್ಯುತ್ತಮ ಡಿಜಿಟಲ್ ಸೇವೆಯನ್ನು ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಪವಿತ್ರ ಸ್ಥಳಗಳಾದ ಮಕ್ಕಾ ಮತ್ತು ಮದೀನಾಗಳ ಡಿಜಿಟಲ್ ಸೇವೆಯನ್ನು ಇನ್ನಷ್ಟು ಸುಧಾರಿಸುವ ಅಗತ್ಯವನ್ನು ರಾಜಕುಮಾರ ಖಾಲಿದ್ ಪ್ರತಿಪಾದಿಸಿದರು.

ಮಕ್ಕಾ ಉಪ ಗವರ್ನರ್ ರಾಜಕುಮಾರ ಅಬ್ದುಲ್ಲಾ ಬಿನ್ ಬಾಂದರ್ ಬುಧವಾರ ಮಕ್ಕಾದ ವಿವಿಧ ಪವಿತ್ರ ಸ್ಥಳಗಳಲ್ಲಿ ತಪಾಸಣೆ ನಡೆಸಿದರು.

18,000 ನಾಗರಿಕ ರಕ್ಷಣೆ ಸಿಬ್ಬಂದಿ ನಿಯೋಜನೆ

 ಹಜ್ ಅವಧಿಯಲ್ಲಿ ಯಾತ್ರಿಕರಿಗೆ ಅತ್ಯುನ್ನತ ಮಟ್ಟದ ಭದ್ರತೆಯನ್ನು ನೀಡಲು ಹಾಗೂ ಅವರು ಎದುರಿಸಬಹುದಾದ ಯಾವುದೇ ಅಪಾಯ ಅಥವಾ ಬೆದರಿಕೆಗಳೊಂದಿಗೆ ವ್ಯವಹರಿಸಲು 18,000ಕ್ಕೂ ಅಧಿಕ ತರಬೇತಿ ಪಡೆದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಹಾಗು ಅವರಿಗೆ 3,000 ವಾಹನಗಳನ್ನು ನೀಡಲಾಗಿದೆ ಎಂದು ನಾಗರಿಕ ರಕ್ಷಣೆ ಮಹಾ ನಿರ್ದೇಶನಾಲಯ ತಿಳಿಸಿದೆ.

ಎಲ್ಲಾ ಪವಿತ್ರ ಸ್ಥಳಗಳಲ್ಲಿ ನಿಯೋಜಿಸಲ್ಪಡುವ ಪಡೆಗಳು, 32 ಸರಕಾರಿ ಸಂಸ್ಥೆಗಳ ಸಹಕಾರದೊಂದಿಗೆ ಹಜ್‌ಗಾಗಿನ ತನ್ನ ಯೋಜನೆಗಳನ್ನು ಕಾರ್ಯಗತಗೊಳಿಸಲು ಸನ್ನದ್ಧವಾಗಿದೆ ಎಂದು ನಿರ್ದೇಶನಾಲಯ ಹೇಳಿದೆ.

ಚಂದ್ರ ಕಂಡರೆ ಮಾಹಿತಿ ನೀಡಿ: ನಿವಾಸಿಗಳಿಗೆ ಸೌದಿ ಸುಪ್ರೀಂ ಕೋರ್ಟ್ ಕರೆ

ದುಲ್ ಹಜ್ ತಿಂಗಳ ಚಂದ್ರ ಶನಿವಾರ ಸಂಜೆ ಕಂಡರೆ ಸಮೀಪದ ನ್ಯಾಯಾಲಯಕ್ಕೆ ಮಾಹಿತಿ ನೀಡುವಂತೆ ಸೌದಿ ಅರೇಬಿಯದ ಸುಪ್ರೀಂ ಕೋರ್ಟ್ ಎಲ್ಲ ನಿವಾಸಿಗಳಿಗೆ ಕರೆ ನೀಡಿದೆ.

ಬರಿಗಣ್ಣಿನಿಂದ ಅಥವಾ ಬೈನಾಕ್ಯುಲರ್ ಮೂಲಕ ಚಂದ್ರನನ್ನು ಯಾರೇ ಕಂಡರೂ ಸಮೀಪದ ನ್ಯಾಯಾಲಯಕ್ಕೆ ಮಾಹಿತಿ ನೀಡಿ ಪ್ರಮಾಣ ಮಾಡಬೇಕು ಅಥವಾ ನ್ಯಾಯಾಲಯದೊಂದಿಗೆ ಸಂಪರ್ಕ ಹೊಂದಿರುವ ಯಾವುದಾದರೂ ಕೇಂದ್ರಕ್ಕೆ ಮಾಹಿತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ಪ್ರಕಟನೆಯಲ್ಲಿ ತಿಳಿಸಿದೆ ಎಂದು ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News