ಚಿಂತಕ ವಲಯದಲ್ಲಿ ಆತಂಕ, ಪ್ರಕ್ಷುಬ್ದ ಸ್ಥಿತಿ: ಡಾ.ಕೆ.ಪಿ.ನಟರಾಜ್

Update: 2018-08-09 15:15 GMT

ಉಡುಪಿ, ಆ.9: ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವಿಲಕ್ಷ್ಮಣ ಕೇಡಿನಿಂದ ಇಂದು ನಾವು ಗೌರಿ ಲಂಕೇಶ್, ಕಲ್ಬುರ್ಗಿಯಂತಹ ಚಿಂತಕರು, ಸಂಶೋಧಕರನ್ನು ಕಳೆದುಕೊಂಡಿದ್ದೇವೆ. ಇಂದು ಚಿಂತಕ ವಲಯದಲ್ಲಿ ಆತಂಕ ಹಾಗೂ ಪ್ರಕ್ಷುಬ್ದ ಸ್ಥಿತಿ ನಿರ್ಮಾಣವಾಗಿದೆ ಎಂದು ತುಮಕೂರಿನ ಕವಿ ಡಾ.ಕೆ.ಪಿ. ನಟರಾಜ್ ಹೇಳಿದ್ದಾರೆ.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಇದರ ಜಂಟಿ ಆಶ್ರಯದಲ್ಲಿ ಗುರುವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಪ್ರದಾನ ಮಾಡಲಾದ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.

ಕೇಡು ಎದುರಿಸಲು ನೇರ ಆಕ್ರಮಣಕಾರಿ ನೆಲೆಯಲ್ಲಿ ಮತಾಂಧತೆ ಹಾಗೂ ಶಸ್ತ್ರಗಳನ್ನು ಬಳಸಿ ವಿಚಾರವಾದಿ, ನೈಜ್ಯ ಪ್ರಜಾಪ್ರಭುತ್ವ ವಾದಿಗಳನ್ನು ಏಕಾಂಗಿ ಗಳನ್ನಾಗಿ ಮಾಡಲಾಗುತ್ತಿದೆ. ಇದನ್ನು ಎದುರಿಸಲು ಆಕ್ರಮಣಕಾರಿ ಮಾರ್ಗ ಕ್ಕಿಂತ ಸಂತ ಮಾರ್ಗ ಅತ್ಯಂತ ಮುಖ್ಯ ಎಂದರು.
ಕತ್ತಲೆ ಹಾಗೂ ಭಯದಿಂದ ಹೊರಬಂದು ನಿಭೀರ್ತಿಯಿಂದ ಬರೆಯಬೇಕು. ಕತ್ತಲೆಯನ್ನು ಎದುರಿಸಲು ಸಾತ್ವಿಕ ಪ್ರತಿಭಟನೆಯ ಮಾರ್ಗವನ್ನು ನಾವೆಲ್ಲ ಕಂಡುಕೊಳ್ಳಬೇಕಾದ ಅಗತ್ಯ ಇದೆ. ಗಾಂಧೀಜಿ ಇದೇ ಮಾರ್ಗವನ್ನು ಅನುಸರಿ ಸುತ್ತಿದ್ದು ಎಂದು ಅವರು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಪ್ರಶಸ್ತಿ ಪುರಸ್ಕೃತ ‘ನಿತ್ಯವೂ ನಿನ್ನೊಡನೆ’ ಕೃತಿಯನ್ನು ಬಿಡುಗಡೆಗೊಳಿಸಿ, ಮಾನ ವೀಯತೆ ಇಲ್ಲದೆ ಬೇರೆ ಇಲ್ಲ ಇದ್ದು ಯಾವುದೇ ಪ್ರಯೋಜನ ಇಲ್ಲ. ಸಾಹಿತ್ಯದ ಓದು ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಡುತ್ತದೆ. ಇದರಿಂದ ಮಾನವೀಯತೆ ಬೆಳೆಯಲು ಸಾಧ್ಯ ಎಂದು ತಿಳಿಸಿದರು.

ಹಿರಿಯ ವಿಮರ್ಶಕ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಕೃತಿ ಪರಿಚಯ ಮಾಡಿದರು. ಮುಖ್ಯ ಅತಿಥಿಗಳಾಗಿ ಮಣಿಪಾಲ ಅಕಾಡೆಮಿ ಅಪ್ ಜನರಲ್ ಎಜ್ಯುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಉಪಸ್ಥಿತರಿದ್ದರು. ಕೇಂದ್ರದ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಶ್ಮಿತಾ ಎ. ವಂದಿಸಿದರು. ಪೃಥ್ವಿರಾಜ್ ಕವ್ತಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News