×
Ad

ಉಡುಪಿ ಜಿಲ್ಲೆಯಲ್ಲಿ ಮಳೆಹಾನಿ: 40ಕೋಟಿ ರೂ. ಬಿಡುಗಡೆಗೆ ಕಂದಾಯ ಸಚಿವರಿಗೆ ಕೋಟ ಪತ್ರ

Update: 2018-08-09 20:50 IST

ಉಡುಪಿ, ಆ.9: ಉಡುಪಿ ಜಿಲ್ಲೆಯಲ್ಲಿ ಕಳೆದೆರಡು ತಿಂಗಳಲ್ಲಿ ಸಂಭವಿಸಿದ ಮಳೆಹಾನಿಯಿಂದಾದ ನಷ್ಟವನ್ನು ಭರಿಸಲು ಜಿಲ್ಲೆಗೆ ಕೂಡಲೇ 40 ಕೋಟಿ ರೂ.ಗಳನ್ನು ತುರ್ತಾಗಿ ಬಿಡುಗಡೆಗೊಳಿಸುವಂತೆ ವಿಧಾನಪರಿಷತ್‌ನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ರಾಜ್ಯ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಪತ್ರ ಬರೆದಿದ್ದಾರೆ.

ಜಿಲ್ಲೆಯಲ್ಲಿ ಸುದಿರ ಭಾರೀ ಮಳೆಯಿಂದಾಗಿ ಜಿಲ್ಲೆಯ ರಸ್ತೆ, ಸೇತುವೆ, ಅಂಗನವಾಡಿ, ವಾಸ್ತವ್ಯದ ಮನೆಗಳು ಹಾನಿಗೊಳಗಾಗಿದ್ದು, ಉಡುಪಿ ಜಿಲ್ಲಾಧಿಕಾರಿ ಅವರು ಈ ಕುರಿತು ಹಾನಿಯ ಸಮೀಕ್ಷೆ ನಡೆಸಿ ಸುಮಾರು 40 ಕೋಟಿ ರೂ.ಗಳನ್ನು ತುರ್ತು ಬಿಡುಗಡೆಗೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಜಿಲ್ಲಾಧಿಕಾರಿಯವರು ಕೋರಿರುವ 40 ಕೋಟಿ ರೂ.ಗಳನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಕೋಟ ಅವರು ಕಂದಾಯ ಸಚಿವರು ಹಾಗೂ ಇಲಾಖೆಯ ವಿಪತ್ತು ನಿರ್ವಹಣಾ ವಿಭಾಗದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ಪಂಚಾಯತ್‌ರಾಜ್ ಇಲಾಖೆಯ 11 ಸೇತುವೆ, ಲೋಕೋಪಯೋಗಿ ಇಲಾಖೆಯ 20 ಸೇತುವೆಗಳು, ನಗರಾಭಿವೃದ್ಧಿಯ 8 ಸೇತುವೆಗಳು ಕುಸಿದುಹೋಗಿದ್ದು, 76 ಕಾಲುಸಂಕಗಳು ಕೊಚ್ಚಿಹೋಗಿವೆ. ನೀರಿನ ಟ್ಯಾಂಕ್, ಸರಕಾರಿ ಕಟ್ಟಡಗಳು ಅಪಾರ ಪ್ರಮಾಣದಲ್ಲಿ ಕುಸಿದು ಬಿದ್ದಿದ್ದು, ಸುಮಾರು 306ಕಿ.ಮೀ.. ಉದ್ದದ ರಸ್ತೆ, 39 ಸೇತುವೆ, 76 ಕಾಲುಸಂಕ, ಮೆಸ್ಕಾಂನ 3007 ವಿದ್ಯುತ್ ಕಂಬಗಳು, 356 ಪರಿವರ್ತಕಗಳು ಅಲ್ಲದೇ ಮೀನುಗಾರಿಕೆ ಮತ್ತು ಬಂದರು ಇಲಾಖೆಯ ಸಮುದ್ರದಂಚಿನ 1683ಮೀ. ಉದ್ದದ ತೀರದಲ್ಲಿ ಸಮುದ್ರ ಕೊರೆತ ಉಂಟಾಗಿದೆ.

ಇವುಗಳ ತುರ್ತು ನಿರ್ವಹಣೆಗೆ ತಕ್ಷಣವೇ 40 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಕೋಟ ಶ್ರೀನಿವಾಸ ಪೂಜಾರಿ, ಸಚಿವ ದೇಶಪಾಂಡೆ ಅವರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.

ವಿದ್ಯಾರ್ಥಿಗಳಿಗೆ ವಸತಿ ಸಮಸ್ಯೆ: ಜಿಲ್ಲಾ ಕೇಂದ್ರವಾದ ಉಡುಪಿಗೆ ದೂರದೂರುಗಳಿಂದ ವಿದ್ಯಾಭ್ಯಾಸಕ್ಕಾಗಿ ಬರುವ ಬಡ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ವಸತಿ ಸೌಲಭ್ಯ ದೊರಕದೇ ಸಮಸ್ಯೆ ಎದುರಿಸುತಿದ್ದಾರೆ ಎಂದು ಕೋಟ ಸಚಿವರು ಹಾಗೂ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಸುಮಾರು 925ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದರೂ ಇಲ್ಲಿಯವರೆಗೆ ಕೇವಲ 479 ವಿದ್ಯಾರ್ಥಿಗಳಿಗೆ ಮಾತ್ರ ವಸತಿ ಸೌಲಭ್ಯ ದೊರಕಿದ್ದು, ಇನ್ನುಳಿದ 500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಸತಿ ನಿಲಯದ ಸೌಲಭ್ಯ ಸಿಗದೇ ಪರದಾಡುವ ಸ್ಥಿತಿ ಯಲ್ಲಿದ್ದಾರೆ ಎಂದು ಕೋಟ ವಿವರಿಸಿದ್ದಾರೆ.

ಈ ಬಗ್ಗೆ ಸಚಿವರು ಶೀಘ್ರ ನಿಗಾ ವಹಿಸಿ ಜಿಲ್ಲಾಧಿಕಾರಿಗಳು ಸರಕಾರಕ್ಕೆ ಸಲ್ಲಿಸಿರುವ ಭರ್ತಿಯಾಗದೇ ಖಾಲಿ ಉಳಿದಿರುವ 197 ಸಂಖ್ಯಾಬಲದಲ್ಲಿ ಜಿಲ್ಲೆಯಲ್ಲಿ ಹೆಚ್ಚು ಬೇಡಿಕೆಯಿರುವ 9 ವಿದ್ಯಾರ್ಥಿ ನಿಲಯಗಳಿಗೆ 135 ಸಂಖ್ಯಾ ಬಲವನ್ನು ವರ್ಗಾಯಿಸಿ 2018-19ನೇ ಸಾಲಿನಲ್ಲಿ ಹೆಚ್ಚುವರಿ ಸೀಟನ್ನು ವಿವಿಧ ವಸತಿ ನಿಲಯಗಳಿಗೆ ಪೂರೈಸಬೇಕೆಂದು ಸರಕಾರವನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News