ಕರಿಮೆಣಸು ಆಮದು ನಿರ್ಬಂಧಕ್ಕೆ ಶೋಭಾ ಆಗ್ರಹ
ಉಡುಪಿ, ಆ.9: ಇಳುವರಿಯಲ್ಲಿನ ಭಾರೀ ಪ್ರಮಾಣದಜ ಕುಸಿತ ಹಾಗೂ ಬೆಲೆಗಳಲ್ಲಿ ದೊಡ್ಡ ಪ್ರಮಾಣದ ಇಳಿಕೆಯಿಂದಾಗಿ ಕರ್ನಾಟಕ ಸಹಿತ ದಕ್ಷಿಣದ ರಾಜ್ಯಗಳ ಕರಿಮೆಣಸು ಬೆಳೆಗಾರರು ಕಂಗೆಟ್ಟಿದ್ದಾರೆ. ವಿವಿಧ ಜಾಗತಿಕ ವ್ಯಾಪಾರ ಒಪ್ಪಂದಗಳಲ್ಲಿರುವ ನ್ಯೂನ್ಯತೆಗಳ ಲಾಭ ಪಡೆದು ವಿಯೆಟ್ನಾಂನಂತಹ ದೇಶ ಗಳಿಂದ ಕಡಿಮೆ ಗುಣಮಟ್ಟದ ಕರಿಮೆಣಸು ದೇಶದ ಮಾರುಕಟ್ಟೆಗೆ ಹರಿದು ಬರುತ್ತಿರುವುದರಿಂದ ಬೆಳೆಗಾರರು ಇನ್ನಷ್ಟು ಹತಾಶರಾಗಿದ್ದಾರೆ. ಆದ್ದರಿಂದ ಕೇಂದ್ರ ಸರಕಾರ ಈ ಕೂಡಲೇ ಕರಿಮಣಸು ಆಮದು ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ಲೋಕಸಭೆಯಲ್ಲಿ ನಿಯಮ 377ರಡಿ ಕರಿಮೆಣಸು ಬೆಳೆಗಾರರ ಸಂಕಷ್ಟಗಳನ್ನು ಎಳೆಎಳೆಯಾಗಿ ವಿವರಿಸಿದ ಶೋಭಾ ಕರಂದ್ಲಾಜೆ, ಸರಕಾರ ಕರಿಮಣಸಿನ ಆಮದಿಗೆ ಕಿಲೋ ಒಂದಕ್ಕೆ 500 ರೂ.ವನ್ನು ಕನಿಷ್ಟ ಆಮದು ಬೆಲೆಯನ್ನಾಗಿ ನಿಗದಿಪಡಿಸಿದ್ದರೂ ಅದರ ಆಮದು ಕಡಿಮೆಯಾಗಿಲ್ಲ. ಸರಕಾರ ಆಮದಿಗೆ ಕೆಲ ನಿಯಂತ್ರಣಗಳನ್ನು ಹೇರಿದ್ದರೂ, ಈ ಆದೇಶದ ಕೆಲವೊಂದು ನ್ಯೂನ್ಯತೆ ಗಳಿಂದ ಕರಿಮೆಣಸಿನ ಆಮದು ಅವ್ಯಾಹತವಾಗಿ ಮುಂದುವರಿದಿದೆ ಎಂದವರು ಕಳವಳ ವ್ಯಕ್ತಪಡಿಸಿದರು.