ಜೈಲ್‌ಭರೋ ಚಳವಳಿ: ಸಿಐಟಿಯು ಮುಖಂಡರ ಬಂಧನ

Update: 2018-08-09 15:41 GMT

ಬೈಂದೂರು, ಆ.9: ಬಂಡವಾಳಶಾಹಿ ಪರವಾದ ಕೇಂದ್ರ ಸರಕಾರ ನೀತಿ ಹಾಗೂ ಕಾರ್ಮಿಕರ ಕಾನೂನು ತಿದ್ದುಪಡಿ ವಿರೋಧಿಸಿ ಮತ್ತು ಜನಪರ ನೀತಿ ಯನ್ನು ಜಾರಿಗೆ ತರುವಂತೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ರೈತ, ಕಾರ್ಮಿಕ ಹಾಗೂ ಕೂಲಿಕಾರರ ಜೈಲ್ ಭರೋ ಚಳವಳಿಯು ಗುರುವಾರ ಬೈಂದೂರು ತಾಲೂಕು ಕಚೇರಿ ಎದುರು ಜರಗಿತು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಶಂಕರ್ ಮಾತನಾಡಿ, ಕೇಂದ್ರ ಸರಕಾರವು ದೇಶದ ರೈತರು, ಕೂಲಿಕಾರರು, ಕಾರ್ಮಿಕರ ವಿರುದ್ಧ ನೀತಿಗಳನ್ನು ಜಾರಿಗೆ ತಂದು ದೇಶದ ಬಂಡವಾಳಶಾಹಿಗಳಿಗೆ ವಿಪರೀತ ಲಾಭ ಗಳಿಸಲು ನೆರವಾಗುತ್ತಿದೆ. ಇದರ ವಿರುದ್ಧ ಮೂರು ಹಂತದ ಹೋರಾಟಗಳನ್ನು ನಡೆಸಲು ದ್ಧೇಶಿಸಿದ್ದು, ಸೆ.5ರಂದು ನಡೆಯುವ ಪಾರ್ಲಿಮೆಂಟ್ ಚಲೋವನ್ನು ಯಶಸ್ವಿ ಗೊಳಿಸಬೇಕು ಎಂದು ಕರೆ ನೀಡಿದರು.

ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ದೇಶದ ಜನ ಸಾಮಾನ್ಯರ ಸಾವಿರಾರು ಕೋಟಿ ರೂ. ತೆರಿಗೆಗಳನ್ನು ಕೇಂದ್ರ ಸರಕಾರವು ದೇಶದ ಶ್ರೀಮಂತ ಬಂಡವಾಳಗಾರರಿಗೆ ಪ್ರತಿ ವರ್ಷ 5ಲಕ್ಷ ಕೋಟಿ ರೂ. ರಿಯಾಯಿತಿ ನೀಡುತ್ತಿದೆ. ಆದರೆ ರೈತರಿಗೆ, ಕೂಲಿ ಕಾರರಿಗೆ, ಕಾರ್ಮಿಕರಿಗೆ ಕಲ್ಯಾಣ ಯೋಜನೆಗೆ ಹಣದ ಕೊರತೆ ನೆಪ ಹೇಳುತ್ತಿದೆ. ಮೋದಿ ಸರಕಾರ ಶೇ.0.1ರಷ್ಟು ಇರುವ ಬಂಡವಾಳಗಾರರ ಪರ ಆಡಳಿತ ನಡೆಸುತ್ತಿದ್ದು, ಶೇ.99.9ರಷ್ಟಿರುವ ಸಾಮಾನ್ಯ ಜನರನ್ನು ನಿರ್ಲಕ್ಷಸಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡರಾದ ವೆಂಕಟೇಶ್ ಕೋಣಿ, ಗಣೇಶ್ ತೊಂಡೆಮಕ್ಕಿ, ಗಣೇಶ ಮೊಗವೀರ, ರಾಜೀವ ಪಡುಕೋಣೆ, ರಮೇಶ್ ಗುಲ್ವಾಡಿ, ಸಂತೋಷ ಹೆಮ್ಮಾಡಿ, ಅರುಣ್ ಗಂಗೊಳ್ಳಿ, ಚಿಕ್ಕ ಮೊಗವೀರ, ನಾಗರತ್ನ ನಾಡ, ಶೀಲಾವತಿ ಮೊದಲಾದವರು ಹಾಜರಿದ್ದರು. ಈ ಸಂದರ್ಭ ಧರಣಿನಿರತರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News