×
Ad

36 ವರ್ಷಗಳಿಂದ ಪಾಕಿಸ್ತಾನ ಜೈಲಿನಲ್ಲಿದ್ದ ಭಾರತೀಯ ಕೊನೆಗೂ ಬಂಧಮುಕ್ತ

Update: 2018-08-09 21:11 IST

ಜೈಪುರ, ಆ.9: ಕಳೆದ 36 ವರ್ಷಗಳಿಂದ ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿರುವ ಜೈಪುರ ನಿವಾಸಿಯೊಬ್ಬರು ಕೊನೆಗೂ ಮುಂದಿನ ವಾರ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಜೈಪುರದ ಸಂಸದ ರಾಮಚರಣ್ ಬೊರ ತಿಳಿಸಿದ್ದಾರೆ.

ಜೈಪುರ ನಿವಾಸಿ ಗಜಾನಂದರನ್ನು ಪಾಕಿಸ್ತಾನದ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಕೇಂದ್ರ ವಿದೇಶ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ ಸಿಂಗ್ ತಿಳಿಸಿರುವುದಾಗಿ ಸಂಸದರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಗಜಾನಂದ ಅವರ ಬಿಡುಗಡೆಯ ಬಗ್ಗೆ ಚರ್ಚೆ ನಡೆಸಲು ತಾನು ಪ್ರತಿನಿಧಿಗಳ ಜೊತೆ ಸಚಿವರನ್ನು ಭೇಟಿಯಾಗಿದ್ದು, ಈ ವೇಳೆ ಅವರು ಗಜಾನಂದರನ್ನು ಆಗಸ್ಟ್ 13ರಂದು ಲಾಹೋರ್ ಜೈಲಿನಿಂದ ಬಿಡುಗಡೆಗೊಳಿಸುವ ಸಾಧ್ಯತೆಯಿದೆ ಎಂದಿರುವುದಾಗಿ ಬೊರ ತಿಳಿಸಿದ್ದಾರೆ. ಸದ್ಯ 68ರ ಹರೆಯದಲ್ಲಿರುವ ಗಜಾನಂದ ಅವರಿಗೆ ಪಾಕ್ ನ್ಯಾಯಾಲಯ ಎರಡು ತಿಂಗಳ ಜೈಲುಶಿಕ್ಷೆಯನ್ನು ವಿಧಿಸಿತ್ತು. ಆದರೆ ಅವರಿಗೆ ವಕೀಲರನ್ನು ನಿರಾಕರಿಸಲಾಗಿದ್ದ ಕಾರಣ ಕಳೆದ 36 ವರ್ಷಗಳಿಂದ ಅವರು ಲಾಹೋರ್‌ನ ಕೊಟ್ ಲಕ್ಪತ್ ಜೈಲಿನಲ್ಲಿ ಬಂಧಿಯಾಗಿದ್ದಾರೆ ಎಂದು ಬೊರ ತಿಳಿಸಿದ್ದಾರೆ.

ಸದ್ಯ ಪಾಕ್ ಅಧಿಕಾರಿಗಳು ಗಜಾನಂದ ಅವರ ಪೌರತ್ವದ ಬಗ್ಗೆ ಸ್ಪಷ್ಟೀಕರಣ ಕೇಳಿರುವ ಹಿನ್ನೆಲೆಯಲ್ಲಿ ಅವರನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಸಂಸದರು ತಿಳಿಸಿದ್ದಾರೆ. ಆದರೆ ಗಜಾನಂದ ಪಾಕಿಸ್ತಾನ ತಲುಪಿದ್ದಾದರೂ ಹೇಗೆ ಎಂಬ ಬಗ್ಗೆ ಯಾರ ಬಳಿಯೂ ಸ್ಪಷ್ಟ ಮಾಹಿತಿಯಿಲ್ಲ ಎಂದವರು ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News