×
Ad

ಮಕ್ಕಳಿಬ್ಬರಿಗೂ ಅಂಗವೈಕಲ್ಯ: ಹೊತ್ತುಕೊಂಡು ಸಾಗಬೇಕಾದ ಪರಿಸ್ಥಿತಿ

Update: 2018-08-09 21:14 IST

ಮಣಿಪಾಲ, ಆ.9: ಮನೆಯ ಆಧಾರವಾಗಬೇಕಾಗಿದ್ದ ಮಕ್ಕಳಿಬ್ಬರು ಎಳೆಯ ಪ್ರಾಯದಲ್ಲೇ ಅಂಗವೈಕಲ್ಯಕ್ಕೆ ತುತ್ತಾಗಿ ಇನ್ನೊಬ್ಬರ ಆಸರೆಯಲ್ಲಿ ಬದುಕು ವಂತಾಗಿದೆ. ಇದು ಸರಳೇಬೆಟ್ಟು ವಾರ್ಡಿನ ಗಣೇಶ್ ಭಾಗ್ ನಿವಾಸಿ ಪ್ರಮೀಳ ಪೂಜಾರಿ ಎಂಬವರ ಮಕ್ಕಳಾದ ಧನುಷ್(19) ಮತ್ತು ದರ್ಶನ್(16) ಎಂಬ ಸಹೋದರರ ಜೀವನ ಕಥೆಯಾಗಿದೆ.

ಧನುಷ್ ಎಸ್ಸೆಸೆಲ್ಸಿ ಪೂರೈಸಿ ಮಣಿಪಾಲ ಎಂಐಟಿಯಲ್ಲಿ ಪ್ರಥಮ ಡಿಪ್ಲೊಮಾ ಕಂಪ್ಯೂಟರ್ ಸಾಯನ್ಸ್ ಕಲಿಯುತ್ತಿದ್ದು, ದರ್ಶನ್ ಮಣಿಪಾಲ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಎಂಟನೇ ತರಗತಿಯಲ್ಲಿ ಕಲಿಯುತಿದ್ದಾನೆ. ಇದೀಗ ಇವರಿಬ್ಬರಿಗೆ ಕಲಿಕೆ ಮುಂದುವರಿಯಲು ಅಂಗವೈಕಲ್ಯ ತೊಡಕಾಗಿದೆ.

ಪ್ರಮೀಳಾ ಪೂಜಾರಿಗೆ ಹುಟ್ಟಿದ ಎರಡೂ ಗಂಡು ಮಕ್ಕಳನ್ನು ಹುಟ್ಟಿದ ನಾಲ್ಕೈದು ವರ್ಷಗಳಲ್ಲಿಯೇ ಮಣಿಪಾಲದ ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷೆಗೆ ಒಳಪಡಿಸಿದ್ದರು. ಇದರಿಂದ ಅವರಿಗೆ ದುಚ್ಚೇನ್ನೇಸ್ ಮುಸ್ಕುಲರ್ ಡೈಸ್ಟ್ರೋಫಿ ವಿದ್ ಕಾರ್ಡಿಯೊಮೊಪತಿ ಎಂಬ ಕಾಯಿಲೆ ಇದೆ ಎಂಬುದು ಪತ್ತೆಯಾಗಿತ್ತು.

ಇಬ್ಬರಿಗೂ ಚಿಕಿತ್ಸೆ ನೀಡಿದರೂ ಈವರೆಗೆ ಗುಣಮುಖವಾಗಿಲ್ಲ. ಇದೀಗ ಪ್ರೌಢಾವಸ್ಥೆಗೆ ಬಂದಿರುವ ಮಕ್ಕಳು ಸೊಂಟದ ಕೆಳಗೆ ಸ್ವಾಧೀನ ಕಳೆದು ಕೊಂಡಿದ್ದಾರೆ. ಇತರರ ಬೆನ್ನ ಸಹಾಯದಿಂದಲೇ ಸಾಗಬೇಕಾದ ದುಃಸ್ಥಿತಿ ಇವರಿಗೆ ಬಂದೊದಗಿದೆ.

ಸರಕಾರದಿಂದ ಮಂಜೂರಾದ 660 ಚದರ ಅಡಿಯ ಮನೆಯಲ್ಲಿ ವಾಸವಾಗಿರುವ ಈ ಕುಟುಂಬ, ಈ ಮಕ್ಕಳನ್ನು ಕಾಲುದಾರಿಯಲ್ಲಿ ಹೊತ್ತುಕೊಂಡು ಗುಡ್ಡ ಹತ್ತಬೇಕಾಗಿದೆ. ಪ್ರತಿಭಾವಂತರಾಗಿರುವ ಈ ಮಕ್ಕಳು ಇದೀಗ ಮನೆ ಯಲ್ಲೇ ಕುಳಿತು ಕಂಪ್ಯೂಟರ್‌ನಲ್ಲಿ ಉದ್ಯೋಗ ಮಾಡುವ ಇರಾದೆ ಹೊಂದಿದ್ದಾರೆ. ಆದರೆ ಕಿತ್ತು ತಿನ್ನುವ ಬಡತನ ಇದಕ್ಕೆಲ್ಲ ಅಡ್ಡಿಯಾಗಿದೆ. ಇವರ ತಾಯಿ ಮತ್ತು ಅಜ್ಜಿ ದಿನಕೂಲಿ ಮಾಡಿ ಮನೆ ನಡೆಸಿಕೊಂಡು ಹೋಗುತ್ತಿದ್ದಾರೆ.

ಈ ಬಡ ಕುಟುಂಬಕ್ಕೆ ಸಹೃದಯಿಗಳು ನೆರವು ನೀಡುವಂತೆ ಕೋರಲಾಗಿದೆ. ಸಿಂಡಿಕೇಟ್ ಬ್ಯಾಂಕ್ ಮಣಿಪಾಲ ಶಾಖೆ ಧನುಷ್ ಅಕೌಂಟ್ ನಂಬ್ರ 01112210055279, ಐಎಫ್‌ಎಸ್‌ಸಿ ಕೋಡ್: ಎಸ್‌ವೈಎನ್‌ಬಿ0000111, ಸಿಂಡಿಕೇಟ್ ಬ್ಯಾಂಕ್ ಪ್ರಧಾನ ಕಚೇರಿ ಮಣಿಪಾಲ ಇಲ್ಲಿಗೆ ವರ್ಗಾಯಿಸ ಬಹುದು. ಹೆಚ್ಚಿನ ಮಾಹಿತಿಗಾಗಿ ಪ್ರಮೀಳಾ ಪೂಜಾರಿ ಮೊಬೈಲ್ ನಂ.: 9880485592ನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News