ಇಮ್ರಾನ್ ಪ್ರಮಾಣವಚನ ವಿಳಂಬ?

Update: 2018-08-09 15:48 GMT

 ಇಸ್ಲಾಮಾಬಾದ್, ಆ. 9: ಪಾಕಿಸ್ತಾನದ ಮುಂದಿನ ಪ್ರಧಾನಿ ಎಂಬುದಾಗಿ ಭಾವಿಸಲಾಗಿರುವ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್‌ರ ಪ್ರಮಾಣವಚನ ಈ ಮೊದಲು ಘೋಷಿಸಿರುವಂತೆ ಆಗಸ್ಟ್ 11ರಂದು ನಡೆಯಲಾರದು ಎಂದು ಹೇಳಲಾಗಿದೆ.

ಪ್ರಮಾಣವಚನ ಕಾರ್ಯಕ್ರಮವು ಆಗಸ್ಟ್ 16 ಅಥವಾ 17ರಂದು ನಡೆಯುವ ಸಾಧ್ಯತೆಗಳಿವೆ ಎಂದು ವರದಿಗಳು ಹೇಳಿವೆ.

ತಾನು ಆಗಸ್ಟ್ 11ರಂದು ಪ್ರಮಾಣವಚನ ಸ್ವೀಕರಿಸಲು ಉದ್ದೇಶಿಸಿದ್ದೇನೆ ಎಂಬುದಾಗಿ ಇಮ್ರಾನ್ ಖಾನ್ ಪಿಟಿಐ ನಾಯಕರಿಗೆ ಹೇಳಿದ್ದರು.

ಆದಾಗ್ಯೂ, ಪ್ರಮಾಣವಚನ ಕಾರ್ಯಕ್ರಮ ಆಗಸ್ಟ್ 16 ಅಥವಾ 17ರಂದು ನಡೆಯುವ ಸಾಧ್ಯತೆಯಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ನೂತನ ಪ್ರಧಾನಿಯನ್ನು ಆರಿಸಲು ಪಿಟಿಐ ಪಕ್ಷವು ಸಂಸತ್ತಿನಲ್ಲಿ ಇನ್ನೂ ಅಗತ್ಯ ಬಲವನ್ನು ಹೊಂದಿಲ್ಲದಿರುವ ಹಿನ್ನೆಲೆಯಲ್ಲಿ ಈ ವಿಳಂಬವಾಗಿರಬಹುದು ಎಂದು ವರದಿಗಳು ಹೇಳಿವೆ.

9 ಕ್ಷೇತ್ರಗಳ ಫಲಿತಾಂಶಕ್ಕೆ ತಡೆ

 ಈ ನಡುವೆ, ಪಾಕಿಸ್ತಾನದಲ್ಲಿ ಸರಕಾರ ರಚನೆಗೆ ಇನ್ನೊಂದು ಅಡಚಣೆ ಎದುರಾಗಿದೆ. ಆ ದೇಶದ ಚುನಾವಣಾ ಆಯೋಗವು ಜುಲೈ 25ರಂದು ನಡೆದ ಚುನಾವಣೆಯ ಅಂತಿಮ ಫಲಿತಾಂಶವನ್ನು ಈ ವಾರ ಪ್ರಕಟಿಸಿದೆಯಾದರೂ, ರಾಷ್ಟ್ರೀಯ ಸಂಸತ್ತಿನ 9 ಕ್ಷೇತ್ರಗಳು ಮತ್ತು ಪ್ರಾಂತೀಯ ಅಸೆಂಬ್ಲಿಯ 17 ಕ್ಷೇತ್ರಗಳ ಫಲಿತಾಂಶವನ್ನು ತಡೆಹಿಡಿದಿದೆ.

ಇದು ಸರಕಾರ ರಚನೆಯ ಪ್ರಕ್ರಿಯೆ ಮೇಲೆ ಪರಿಣಾಮ ಬೀರಿದೆ ಹಾಗೂ ವಿವಾದಕ್ಕೂ ಕಾರಣವಾಗಿದೆ.

ಪಾಕಿಸ್ತಾನ ಸಂಸತ್ತು ನ್ಯಾಶನಲ್ ಅಸೆಂಬ್ಲಿಯ 272 ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ ಪಿಟಿಐ ಪಕ್ಷ ಈ ಮೊದಲು 116 ಸ್ಥಾನಗಳನ್ನು ಗಳಿಸಿತ್ತು. ಈಗ ಅದರ ಸ್ಥಾನಗಳ ಸಂಖ್ಯೆ 112ಕ್ಕೆ ಇಳಿದಿದೆ.

ಅದೇ ರೀತಿ, ಅದರ ಮಿತ್ರಪಕ್ಷ ಬಲೂಚಿಸ್ತಾನ ಅವಾಮಿ ಪಾರ್ಟಿಯ ಸ್ಥಾನಗಳ ಸಂಖ್ಯೆ 4ರಿಮದ 3ಕ್ಕೆ ಇಳಿದಿದೆ.

ಫಲಿತಾಂಶಗಳನ್ನು ಯಾಕೆ ತಡೆಹಿಡಿಯಲಾಯಿತು ಎಂಬುದಕ್ಕೆ ಕಾರಣಗಳನ್ನು ಆಯೋಗವು ನೀಡಿಲ್ಲವಾದರೂ, ಕೆಲವು ಕ್ಷೇತ್ರಗಳಲ್ಲಿ ರಹಸ್ಯ ಮತದಾನದ ನಿಯಮಗಳನ್ನು ಉಲ್ಲಂಘಿಸಿರುವುದಕ್ಕಾಗಿ ಈ ಕ್ರಮಗಳನ್ನು ತೆಗೆದುಕೊಂಡಿರುವ ಸಾಧ್ಯತೆಯಿದೆ ಎಂದು ಊಹಿಸಲಾಗಿದೆ.

ಚುನಾವಣಾ ಕಮಿಶನರ್ ಮಲಗಿದ್ದರು: ಮುಖ್ಯ ನ್ಯಾಯಾಧೀಶ

ಪಾಕಿಸ್ತಾನದ ಮುಖ್ಯ ಚುನಾವಣಾ ಕಮಿಶನರ್ ನ್ಯಾಯಮೂರ್ತಿ (ನಿವೃತ್ತ) ಸರ್ದಾರ್ ಮುಹಮ್ಮದ್ ರಝಾರನ್ನು ಟೀಕಿಸಿರುವ ಮುಖ್ಯ ನ್ಯಾಯಾಧೀಶ ಸಾಕಿಬ್ ನಿಸಾರ್, ಮತದಾನದ ದಿನದಂದು ತಾನು ಅವರಿಗೆ ಮೂರು ಬಾರಿ ಕರೆ ಮಾಡಿದೆ, ಆದರೆ ಅವರು ಫೋನ್ ಸ್ವೀಕರಿಸಿಲ್ಲ, ಬಹುಶಃ ಅವರು ಮಲಗಿರಬೇಕು ಎಂದಿದ್ದಾರೆ.

ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ಪಕ್ಷದ ಅಭ್ಯರ್ಥಿ ಆಬಿದಾ ರಝಾರ ನಾಮಪತ್ರವನ್ನು ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಮೊಕದ್ದಮೆಯೊಂದರ ವಿಚಾರಣೆಯ ವೇಳೆ ಮುಖ್ಯ ನ್ಯಾಯಾಧೀಶ ನಿಸಾರ್ ಈ ಮಾತುಗಳನ್ನು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News