ಹಕ್ಕುಪತ್ರ ತಿರಸ್ಕರಿಸುವ ಆದೇಶ ವಾಪಸಾತಿಗೆ ಕೋಟ ಶ್ರೀನಿವಾಸ ಪೂಜಾರಿ ಆಗ್ರಹ
ಮಂಗಳೂರು, ಆ.9: ಅಕ್ರಮ ಸಕ್ರಮದಡಿ 94ಸಿ, 94 ಸಿಸಿ, ಕುಮ್ಕಿ, ಗೋಮಾಳ, ಡೀಮ್ಡ್ ಫಾರೆಸ್ಟ್‌ನಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಹಕ್ಕುಪತ್ರ ನೀಡುವ ಅರ್ಜಿಗಳನ್ನು ತರಸ್ಕರಿಸಲು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಒಂದು ತಿಂಗಳ ಹಿಂದೆ ಹೊರಡಿಸಿರುವ ಆದೇಶವನ್ನು ವಾಪಸ್ ಪಡೆಯಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.
ನಗರದ ಕೊಡಿಯಾಲ್‌ಬೈಲ್‌ನ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ. ಜಿಲ್ಲೆಯಲ್ಲಿ 70 ವರ್ಷಗಳ ಕಾಲ ಸ್ವಂತ ಸೂರಿಲ್ಲದವರು ಬಡವರು ಹಕ್ಕುಪತ್ರ ಪಡೆಯಲು 94ಸಿಅಡಿ 98,593 ಅರ್ಜಿಗಳನ್ನು ಸಲ್ಲಿಸಿದ್ದಾರೆ. 41,987 ಅರ್ಜಿಗಳು ತಿರಸ್ಕೃತಗೊಂಡಿದ್ದು, 15 ಸಾವಿರ ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ. 41 ಸಾವಿರ ಅರ್ಜಿಗಳನ್ನು ಮಂಜೂರು ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ 34,850 ಹೆಕ್ಟೇರ್ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಅಲ್ಲವೆಂದಿದ್ದಾರೆ. ಇದರಲ್ಲಿ ಗ್ರಾಮ ಪಂಚಾಯತ್, ಸರಕಾರಿ ಆಸ್ಪತ್ರೆ, ಪ್ರಾಥಮಿಕ ಶಾಲೆಗಳು, ಅಂಗಡಿಗಳಿವೆ, ಬಡವರು ಮನೆ ಕಟ್ಟಿಕೊಂಡಿದ್ದಾರೆ. ಇದನ್ನು ಬಡವರಿಗೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಿದರು.
94ಸಿಸಿಯಡಿ ನಗರ ವ್ಯಾಪ್ತಿ ಸರಕಾರಿ ಜಾಗದಲ್ಲಿ ಬಡವರು ಮನೆ ಕಟ್ಟಿಕೊಂಡಿದ್ದು, ಈ ಕುರಿತು 36,689 ಅರ್ಜಿಗಳು ಸ್ವೀಕೃತಗೊಂಡಿವೆ. ಇದರಲ್ಲಿ 10,097 ಅರ್ಜಿಗಳು ವಿಲೇವಾರಿಗೆ ಬಾಕಿಯಾಗಿವೆ. 16,580 ಅರ್ಜಿಗಳು ಮಂಜೂರಾಗಿವೆ. 2,500 ಹಕ್ಕುಪತ್ರಗಳನ್ನು ನೀಡುವುದು ಬಾಕಿ ಇದೆ ಎಂದು ಅವರು ಮಾಹಿತಿ ನೀಡಿದರು.
ಕಂದಾಯ ಸಚಿವರ ಆದೇಶವನ್ನು ತಕ್ಷಣ ವಾಪಸ್ ಪಡೆಯದಿದ್ದಲ್ಲಿ ಬಿಜೆಪಿಯಿಂದ ಬಡವರ ಪರವಾಗಿ ಬೀದಿಗಿಳಿದು ಪ್ರತಿಭಟನೆಯನ್ನು ನಡೆಸಲಾಗುವುದು. ಲಕ್ಷಾಂತರ ಜನರು ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದಾರೆ. ಬಡ ಜನರ ಹಕ್ಕುಪತ್ರ ಪಡೆಯುವ ಕೊನೆ ಆಸೆ ಕಮರುತ್ತಿದೆ. ಮೀನಮೇಷದ ರಾಜಕಾರಣ ನಡೆಸುವುದನ್ನು ಬಿಡಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ವೇದವ್ಯಾಸ ಕಾಮತ್, ಬಿಜೆಪಿ ಮುಖಂಡರಾದ ರವಿಶಂಕರ್ ಮಿಜಾರು, ಜಿತೇಂದ್ರ ಕೊಟ್ಟಾರಿ, ಸಂಜಯ್‌ಪ್ರಭು, ಭಾಸ್ಕರ್‌ಚಂದ್ರ ಶೆಟ್ಟಿ, ಮಿಥುನ್‌ಕುಮಾರ್, ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.
‘ಸ್ಮಾರ್ಟ್‌ಸಿಟಿಗೆ ಪೂರ್ಣಕಾಲಿಕ ಎಂಡಿ ನೇಮಕ ಮಾಡಲಿ’
ಕೇಂದ್ರ ಸರಕಾರ ಸ್ಮಾರ್ಟ್‌ಸಿಟಿಗಾಗಿ ಕೋಟ್ಯಂತರ ರೂ. ನೆರವು ನೀಡುತ್ತಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ರಾಜ್ಯ ಸರಕಾರ ಆಡಳಿತ ಎಡವುತ್ತಿದೆ. ರಾಜ್ಯದ ಕೆಲವು ಕಡೆ ಸ್ಮಾರ್ಟ್‌ಸಿಟಿಯ ಯೋಜನೆಯನ್ನೇ ತಯಾರಿಸಿಲ್ಲ. ರಾಜ್ಯ ಸರಕಾರವು ಸ್ಮಾರ್ಟ್‌ಸಿಟಿಗೆ ಪೂರ್ಣಕಾಲಿಕ ಎಂಡಿಯನ್ನೇ ನೇಮಕ ಮಾಡಿಲ್ಲ. ಕೂಡಲೇ ನೇಮಕಾತಿ ಮಾಡಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.
ಕೇಂದ್ರದ ಅನುದಾನವನ್ನು ತಂದು ಅದನ್ನು ಅನುಷ್ಠಾನಗೊಳಿಸಲು ಆರಂಭಿಸಬೇಕಾದ ಸರಕಾರ ಯೋಜನೆಯ ಪೂರ್ಣ ನಕ್ಷೆಯನ್ನೇ ಇನ್ನೂ ತಯಾರಿಸಿಲ್ಲ. ಸ್ಮಾರ್ಟ್‌ಸಿಟಿಯ ಯಾವ ಯೋಜನೆಯೂ ಪೂರ್ಣಗೊಂಡಿಲ್ಲ. ರಾಜ್ಯ ಸರಕಾರ ನಿದ್ರಾವಸ್ಥೆಯಲ್ಲಿದ್ದು, ತಕ್ಷಣ ಪೂರ್ಣಕಾಲಿಕ ಎಂಡಿಯನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
2016ರಲ್ಲಿ ರಾಜ್ಯದ ಏಳು ಜಿಲ್ಲೆಗಳಿಗೆ ಸ್ಮಾರ್ಟ್‌ಸಿಟಿಗಳನ್ನು ಮಂಜೂರು ಮಾಡಿದೆ. ಪ್ರತಿ ಸ್ಮಾರ್ಟ್‌ಸಿಟಿಗೆ ಕೇಂದ್ರ ಸರಕಾರದಿಂದ 500 ಕೋಟಿ. ರೂ. ರಾಜ್ಯ ಸರಕಾರದಿಂದ 500 ಕೋಟಿ ರೂ. ಕೂಡಿಸಿ ಸಾವಿರ ಕೋಟಿ ರೂ.ನಲ್ಲಿ ಅತ್ಯುತ್ತಮ ಸ್ಥತಿಯಲ್ಲಿ ಮೂಲಭೂತ ಸೌಕರ್ಯಗೊಳಿಂದಿಗೆ ಸ್ಮಾರ್ಟ್‌ಸಿಟಿಯನ್ನು ನಿರ್ಮಿಸಬೇಕು ಎಂದು ತಿಳಿಸಿದರು.