×
Ad

ಅ. 10ರಂದು ರಾಷ್ಟ್ರೀಯ ಜಂತುಹುಳ ನಿವಾರಣಾ ದಿನ

Update: 2018-08-09 21:43 IST

ಮಂಗಳೂರು, ಆ.9: ಜಂತುಹುಳ ನಿವಾರಣಾ ದಿನದ ಅಂಗವಾಗಿ ಆಗಸ್ಟ್ 10ರಂದು 1ರಿಂದ 19 ವರ್ಷದೊಳಗಿನ ಮಕ್ಕಳಿಗೆ ಜಂತುಹುಳ ಮಾತ್ರೆಗಳನ್ನು ನೀಡಲಾಗುವುದು. ಶಾಲೆಯಲ್ಲಿ ಅಂದು ವಿಶೇಷ ಅಭಿಯಾನದ ಮೂಲಕ ಮಕ್ಕಳಿಗೆ ಜಂತುಹುಳ ಮಾತ್ರೆಯನ್ನು ತಿನ್ನಿಸಲಾಗುವುದು ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಎಲ್ಲಾ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲಾ ಕಾಲೇಜುಗಳಲ್ಲಿ ಹಾಗೂ ಅಂಗನವಾಡಿಗಳಲ್ಲಿ 1ರಿಂದ 19 ವರ್ಷದೊಳಗಿನ ಎಲ್ಲರಿಗೂ ಜಂತುಹುಳ ನಿವಾರಣಾ ಮಾತ್ರೆಯನ್ನು ಉಚಿತವಾಗಿ ನೀಡಲಾಗುವುದು. ಇದು ಚೀಪುವ ಮಾತ್ರಯಾಗಿದ್ದು, ಮಧ್ಯಾಹ್ನದ ಊಟದ ಬಳಿಕ ಶಾಲೆಗಳಲ್ಲಿ ಶಾಲಾ ಶಿಕ್ಷಕರ ಮತ್ತು ಅಂಗನವಾಡಿಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಉಪಸ್ಥಿತಿಯಲ್ಲಿ ನೀಡಲಾಗುವುದು. 1ರಿಂದ 2 ವರ್ಷದೊಳಗಿನ ಮಕ್ಕಳಿಗೆ ಅರ್ಧ ಮಾತ್ರೆ ಹಾಗೂ 2ರಿಂದ 19 ವರ್ಷದವರೆಗಿನವರಿಗೆ ಇಡೀ ಮಾತ್ರೆಯನ್ನು ನೀಡಲಾಗುವುದು. ಜಿಲ್ಲೆಯಲ್ಲಿ ಅಂದಾಜು 4,91,577 ಮಕ್ಕಳಿಗೆ ಈ ಮಾತ್ರೆ ತಿನ್ನಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಜಂತುಹುಳ ಬಾಧೆಯಿಂದ ಮಕ್ಕಳು ರೋಗಗ್ರಸ್ತರಾಗುತ್ತಾರೆ. ಶಾರೀರಿಕ ಮತ್ತು ಬೌದ್ಧಿಕ ಬೆಳವಣಿಗೆಯೂ ಕುಂಠಿತವಾಗುತ್ತದೆ. ಆದ್ದರಿಂದ ಶಾಲೆಗಳಲ್ಲಿಯೇ ಶಿಕ್ಷಕರ ಸಮ್ಮುಖದಲ್ಲೇ ಈ ಮಾತ್ರೆಯನ್ನು ನುಂಗಿಸಲು ಶಾಲಾ ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ನೈರ್ಮಲ್ಯದ ಕೊರತೆ, ವೈಯಕ್ತಿಕ ಶುಚಿತ್ವದ ಕೊರತೆ ಹಾಗೂ ಜಂತುಹುಳ ಸೋಂಕಿನ ಮಣ್ಣನ್ನು ಸ್ಪರ್ಶಿಸುವುದರಿಂದಲೂ ಜಂತುಹುಳ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದ ಹೊಟ್ಟೆನೋವು, ಬೇಧಿ, ಹಸಿವಿಲ್ಲದಿರುವುದು ಹಾಗೂ ಸುಸ್ತು ಕಾಣಿಸಿಕೊಳ್ಳುತ್ತದೆ ಎಂದು ಅವರು ಮಾಹಿತಿ ನೀಡಿದರು.

10ರಂದು ಜಂತುಹಳ ಮಾತ್ರೆ ಪಡೆಯದಿರುವ ಮಕ್ಕಳಿಗೆ ಮತ್ತು ಅಂಗನವಾಡಿಗಳಲ್ಲಿ ದಾಖಲಾಗದ, ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಆಗಸ್ಟ್ 17ರಂದು ಮಾಪ್ ಅಪ್ ದಿನದಂದು ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಕಡ್ಡಾಯವಾಗಿ ಮಾತ್ರೆ ನೀಲಿದ್ದಾರೆ ಎಂದು ಅವರು ಹೇಳಿದರು.

ಆಗಸ್ಟ್‌ನಲ್ಲಿ ಪ್ರಥಮ ಸುತ್ತಿನ ಗ್ರಾಮ ಸ್ವರಾಜ್ಯ ಅಭಿಯಾನ
ಗ್ರಾಮ ಸ್ವರಾಜ್ಯ ಅಭಿಯಾನ ಕಾರ್ಯಕ್ರಮದ ಪ್ರಥಮ ಸುತ್ತು ಆಗಸ್ಟ್ 13, 14, 17 ಮತ್ತು 18ರಂದು ನಡೆಯಲಿದೆ. ಸೆಪ್ಟಂಬರ್ 10, 11,14, 15ರಂದು ಎರಡನೆ ಸುತ್ತು ಹಾಗೂ ಅಕ್ಟೋಬರ್ 9,10,12,15ರಂದು ನಡೆಯಲಿದೆ ಎಂದು ಡಾ. ರಾಮೃಷ್ಣ ರಾವ್ ಈ ಸಂದರ್ಭ ತಿಳಿಸಿದರು.

ಅಭಿಯಾನದಂಗವಾಗಿ ಮಿಷನ್ ಇಂದ್ರಧನುಷ್‌ನಡಿ ಲಸಿಕಾ ವಂಚಿತ ಹಾಗೂ ಅಪೂರ್ಣ ಲಸಿಕೆ ಪಡೆದ ತಾಯಿ ಮಕ್ಕಳಿಗೆ ಲಸಿಕೆ ನೀಡಲಾಗುವುದು. 2 ವರ್ಷದ ಒಳಗಿನ ಮಕ್ಕಳು, ಗರ್ಭಿಣಿ ತಾಯಂದಿರು, 6 ವರ್ಷದೊಳಗಿನ ಶಾಲೆಯಿಂದ ಹೊರಗುಳಿದ ಮಕ್ಕಳು ಈ ಕಾರ್ಯಕ್ರಮದ ಫಲಾನುಭವಿಗಳಾಗಿರುತ್ತಾರೆ. ಇದೇ ವೇಳೆ ಗರ್ಭಿಣಿಯರ ಪರೀಕ್ಷೆ ನಡೆಸಿ ರಕ್ತಹೀನತೆಯನ್ನು ಪತ್ತೆಹಚ್ಚಲಾಗುವುದು. ಅಗತ್ಯವಿದ್ದಲ್ಲಿ ಕಬ್ಬಿಣಾಂಶದ ಮಾತ್ರೆ ಮತ್ತು ರಕ್ತಹೀನತೆ ಇದ್ದಲ್ಲಿ ಸುಕ್ರೋಸ್ ಚುಚ್ಚು ಮದ್ದನ್ನು ನೀಡಲಾಗುವುದು.

ರಾಷ್ಟ್ರೀಯ ಬಾಲಸ್ವಾಸ್ಥ ಕಾರ್ಯಕ್ರಮದಡಿ 6 ವರ್ಷದೊಳಗಿನ ಮಕ್ಕಳ ಆರೋಗ್ಯವನ್ನು ತಪಾಸಣೆಗೊಳಪಡಿಸಲಾಗುವುದು. ಇದೇ ವೇಳೆ ಕ್ಷಯ ನಿಯಂತ್ರಣ, ಶಿಶುಗಳಿಗೆ ಸ್ತನ್ಯಪಾನದ ಮಹತ್ವ, ಪೋಷಣ್ ಮೊದಲಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಹಾಗೂ ಜಾಗೃತಿಯನ್ನು ಈ ಸಂದರ್ಭ ಒದಗಿಸಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News