ಕೆನಡ ಜೊತೆ ರಾಜತಾಂತ್ರಿಕ ಬಿಕ್ಕಟ್ಟು: ಮಧ್ಯಸ್ಥಿಕೆಗೆ ಅವಕಾಶವಿಲ್ಲ: ಸೌದಿ

Update: 2018-08-09 16:19 GMT

 ರಿಯಾದ್, ಆ. 9: ಸೌದಿ ಅರೇಬಿಯ ಮತ್ತು ಕೆನಡಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನಲ್ಲಿ ಸಂಧಾನಕ್ಕೆ ಅವಕಾಶವಿಲ್ಲ ಎಂದು ಸೌದಿ ಅರೇಬಿಯ ಬುಧವಾರ ಹೇಳಿದೆ. ‘ತನ್ನ ದೊಡ್ಡ ತಪ್ಪನ್ನು’ ಸರಿಪಡಿಸಲು ಏನು ಮಾಡಬೇಕು ಎನ್ನುವುದು ಕೆನಡಕ್ಕೆ ತಿಳಿದಿದೆ ಎಂದು ಅದು ಅಭಿಪ್ರಾಯಪಟ್ಟಿದೆ.

‘‘ಇಲ್ಲಿ ಮಾತುಕತೆ ನಡೆಸುವಂಥಾದ್ದು ಏನೂ ಇಲ್ಲ. ಒಂದು ತಪ್ಪನ್ನು ಮಾಡಲಾಗಿದೆ ಹಾಗೂ ಅದನ್ನು ಸರಿಪಡಿಸಬೇಕಾಗಿದೆ’’ ಎಂದು ಸೌದಿ ಅರೇಬಿಯ ವಿದೇಶ ಸಚಿವ ಆದಿಲ್ ಅಲ್-ಜುಬೈರ್ ರಿಯಾದ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಬಿಕ್ಕಟ್ಟು ಇನ್ನಷ್ಟು ಉಲ್ಬಣಗೊಳ್ಳಬಹುದು ಎಂಬ ಸೂಚನೆಯನ್ನು ನೀಡಿದ ಅವರು, ಕೆನಡದ ವಿರುದ್ಧ ತೆಗೆದುಕೊಳ್ಳಬಹುದಾದ ಇನ್ನಷ್ಟು ಕ್ರಮಗಳನ್ನು ಸೌದಿ ಪರಿಶೀಲಿಸುತ್ತಿದೆ ಎಂದು ಹೇಳಿದರು. ಆದರೆ, ಅದರ ವಿವರಗಳನ್ನು ನೀಡಲಿಲ್ಲ.

ಬಂಧನದಲ್ಲಿರುವ ಸೌದಿ ಅರೇಬಿಯದ ನಾಗರಿಕ ಹಕ್ಕುಗಳ ಹೋರಾಟಗಾರರನ್ನು ಬಿಡುಗಡೆ ಮಾಡುವಂತೆ ಕೆನಡವು ಸೌದಿ ಅರೇಬಿಯದ ಮೇಲೆ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಆ ದೇಶದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಸೌದಿ ಅರೇಬಿಯ ರವಿವಾರ ಕಡಿದುಕೊಂಡಿರುವುದನ್ನು ಸ್ಮರಿಸಬಹುದಾಗಿದೆ. ಸೌದಿ ಅರೇಬಿಯವು ತನ್ನಲ್ಲಿರುವ ಕೆನಡ ರಾಯಭಾರಿಯನ್ನು ಉಚ್ಚಾಟಿಸಿತ್ತು ಹಾಗೂ ಕೆನಡದಲ್ಲಿರುವ ತನ್ನ ರಾಯಭಾರಿಯನ್ನು ವಾಪಸ್ ಕರೆಸಿತ್ತು.

ಪೆಟ್ರೋಲಿಯಂ ಪೂರೈಕೆ ಮೇಲೆ ಪರಿಣಾಮವಿಲ್ಲ

ಸೌದಿ ಅರೇಬಿಯ ಮತ್ತು ಕೆನಡಗಳ ನಡುವೆ ಈಗ ನೆಲೆಸಿರುವ ರಾಜತಾಂತ್ರಿಕ ಬಿಕ್ಕಟ್ಟು ವಿಶ್ವದಾದ್ಯಂತದ ದೇಶಗಳಿಗೆ ಸೌದಿ ಅರೇಬಿಯದ ಪೆಟ್ರೋಲಿಯಂ ಪೂರೈಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ದೇಶದ ಇಂಧನ ಸಚಿವ ಖಾಲಿದ್ ಅಲ್-ಫಾಲಿಹ್ ಗುರುವಾರ ಹೇಳಿದ್ದಾರೆ.

ರಾಜಕೀಯ ಕಾರಣಗಳು ಸೌದಿ ಅರೇಬಿಯದ ಪೆಟ್ರೋಲಿಯಂ ಪೂರೈಕೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿರುವುದಾಗಿ ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News