ದಲಿತ-ರಜಪೂತ ಹಿಂಸಾಚಾರ: ಓರ್ವ ದಲಿತ ಬಲಿ

Update: 2018-08-09 16:33 GMT
ಸಾಂದರ್ಭಿಕ ಚಿತ್ರ

ಮೀರತ್, ಆ.9: ಕನ್ವರಿಯ ಮೆರವಣಿಗೆಯನ್ನು ಕೆಲವು ದಲಿತರು ವೀಕ್ಷಿಸಿದರು ಎಂಬ ಕಾರಣಕ್ಕೆ ರಜಪೂತ ಮತ್ತು ದಲಿತ ಸಮುದಾಯಗಳ ಮಧ್ಯೆ ಉಂಟಾದ ಹಿಂಸಾಚಾರದಲ್ಲಿ ಓರ್ವ ದಲಿತ ಮೃತಪಟ್ಟು ಹಲವರು ಗಾಯಗೊಂಡ ಘಟನೆ ಗುರುವಾರ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.

ದಲಿತರು ಕನ್ವರಿಯ ಮೆರವಣಿಗೆಯನ್ನು ವೀಕ್ಷಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ರಜಪೂತ ಸಮುದಾಯದ ವ್ಯಕ್ತಿಗಳು ಹಿಂಸೆ ಆರಂಭಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೀರತ್‌ನ ಒಂದು ಗ್ರಾಮದಲ್ಲಿ ಆರಂಭವಾದ ಹಿಂಸಾಚಾರ ಪಕ್ಕದ ಗ್ರಾಮಕ್ಕೂ ಹರಡಿದೆ ಎಂದು ಅವರು ತಿಳಿಸಿದ್ದಾರೆ. ಘಟನೆಯಲ್ಲಿ ರೋಹಿತ್ ಎಂಬ 19ರ ಹರೆಯದ ದಲಿತ ಯುವಕ ಮೃತಪಟ್ಟಿದ್ದು, ಪೊಲೀಸರು ರಜಪೂತ ಸಮುದಾಯದ ಮೂವರನ್ನು ಬಂಧಿಸಿದ್ದಾರೆ. ಘಟನಾಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪೊಲೀಸ್‌ಪಡೆಯನ್ನು ನಿಯೋಜಿಸಲಾಗಿದ್ದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಠಿಕಾಣಿ ಹೂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬುಧವಾರ ರಾತ್ರಿ ಕನ್ವರ್ ಮೆರವಣಿಗೆಯನ್ನು ವೀಕ್ಷಿಸಲು ತೆರಳಿದ್ದ ಉಲ್ದೆಪುರ್ ಗ್ರಾಮದ ಮೂವರು ದಲಿತ ಯುವಕರ ಮೇಲೆ ಗುರುವಾರ ಬೆಳಿಗ್ಗೆ ರಜಪೂತ ಸಮುದಾಯದ ಯುವಕರು ಹಲ್ಲೆ ನಡೆಸಿದ್ದರು. ಈ ಘಟನೆ ಹಿರಿಯರ ಮಧ್ಯಪ್ರವೇಶದ ನಂತರ ಶಾಂತಿಯುತವಾಗಿ ಬಗೆಹರಿಸಲ್ಪಟ್ಟಿತ್ತು. ಆದರೆ ಘಟನೆಯಿಂದ ಆಕ್ರೋಶಿತರಾದ ದಲಿತ ಯುವಕರು ರಜಪೂತ ಸಮುದಾಯ ವಾಸಿಸುತ್ತಿರುವ ಪ್ರದೇಶಕ್ಕೆ ತೆರಳಿ ಹಿಂಸಾಚಾರದಲ್ಲಿ ತೊಡಗಿದ್ದಾರೆ. ಈ ವೇಳೆ ನಡೆದ ಘರ್ಷಣೆಯಲ್ಲಿ ದಲಿತ ಯುವಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಉದ್ವಿಗ್ನ ದಲಿತರ ಗುಂಪು ರೋಹಿತ್ ಶವವನ್ನು ರಸ್ತೆಯ ಮಧ್ಯೆಯಿಟ್ಟು ಪ್ರತಿಭಟನೆ ನಡೆಸಿದರು. ಹಂತಕರನ್ನು ಬಂಧಿಸುವವರೆಗೆ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ದಲಿತ ಗುಂಪು ಪಟ್ಟು ಹಿಡಿದಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಮೂವರನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News