×
Ad

ರಾಜ್ಯವೇ ಹುತಾತ್ಮ ಯೋಧನಿಗೆ ಕಂಬನಿ ಮಿಡಿಯುತ್ತಿದ್ದಾಗ ಪಾರ್ಟಿ ಮಾಡಿದ ಬಿಜೆಪಿ ಕಾರ್ಪೊರೇಟರ್‌ಗಳು!

Update: 2018-08-09 22:08 IST

ಮುಂಬೈ, ಆ.9: ಕಾಶ್ಮೀರದಲ್ಲಿ ಗುಂಡಿಗೆ ಬಲಿಯಾದ ಹುತಾತ್ಮ ಯೋಧ ಮೇಜರ್ ಕೌಸ್ತುಬ್ ರಾಣೆಯ ಮೃತದೇಹಕ್ಕಾಗಿ ಮುಂಬೈಯ ಜನತೆ ಕಾಯುತ್ತಿದ್ದ ಸಂದರ್ಭದಲ್ಲಿ ಬಿಜೆಪಿಯ ಶಾಸಕರು ಮತ್ತು ಕಾರ್ಪೊರೇಟರ್‌ಗಳು ಪಕ್ಕದ ಮೀರ ರಸ್ತೆಯಲ್ಲಿರುವ ವಸತಿ ಸಮುಚ್ಚಯದಲ್ಲಿ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿರುವ ವಿಡಿಯೊ ವೈರಲ್ ಆಗಿದೆ.

ಮರಾಠಿ ವಾಹಿನಿಯೊಂದು ಪ್ರಸಾರ ಮಾಡಿರುವ ವಿಡಿಯೊದಲ್ಲಿ ಬಿಜೆಪಿ ಶಾಸಕ ನರೇಂದ್ರ ಮೆಹ್ತಾ ಹಾಗೂ ಮೀರ ಬಯಂದರ್ ನಗರಪಾಲಿಕೆಯ ಹಲವು ಬಿಜೆಪಿ ಕಾರ್ಪೊರೇಟರ್‌ಗಳು ಮಂಗಳವಾರ ರಾತ್ರಿ ಆನಂದ್ ಮಂಜ್ರೇಕರ್ ಎಂಬವರ ಜನ್ಮದಿನಾಚರಣೆಯ ಸಂಭ್ರಮಾಚರಣೆಯಲ್ಲಿ ತೊಡಗಿರುವುದನ್ನು ತೋರಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ನುಸುಳುವಿಕೆಯನ್ನು ತಡೆಯಲು ನಡೆಸಿದ ಕಾರ್ಯಾಚರಣೆಯಲ್ಲಿ ಮೇಜರ್ ರಾಣೆ ಹುತಾತ್ಮರಾಗಿದ್ದರು. ವರ ಮೃತದೇಹ ಮುಂಬೈ ತಲುಪುವ ಒಂದು ದಿನ ಮೊದಲು ಈ ಸಮಾರಂಭ ನಡೆದಿತ್ತು ಎಂದು ಮಾಧ್ಯಮ ವರದಿ ಮಾಡಿದೆ.

ಕೂಡಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೆಹ್ತಾ, “ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿರುವುದು ದುರದೃಷ್ಟಕರ. ಅದಕ್ಕಾಗಿ ಕ್ಷಮೆ ಕೇಳುತ್ತೇನೆ. ನಾವೆಲ್ಲರೂ ಪಶ್ಚಾತ್ತಪ ಹೊಂದಿದ್ದೇವೆ. ಇದು ರಾಜಕೀಯ ವಿಷಯವಲ್ಲ” ಎಂದು ವಾಹಿನಿಗೆ ತಿಳಿಸಿದ್ದಾರೆ. ಇಡೀ ವಸತಿ ಸಮುಚ್ಚಯವೇ ಮೇಜರ್ ಸಾವಿಗೆ ಕಂಬನಿ ಮಿಡಿಯುತ್ತಿದ್ದಾಗ ಸಂಭ್ರಮಾಚರಣೆಯನ್ನು ಯಾಕೆ ರದ್ದು ಮಾಡಲಿಲ್ಲ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೆಹ್ತಾ, “ಅದು ಪೂರ್ವ ಯೋಜಿತ ಸಮಾರಂಭವಾಗಿತ್ತು” ಎಂದು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಎನ್‌ಸಿಪಿ ವಕ್ತಾರ ನವಾಬ್ ಮಲಿಕ್, ಬಿಜೆಪಿಯಿಂದ ಆರಿಸಲ್ಪಟ್ಟ ಜನರ ಪ್ರತಿನಿಧಿಗಳಿಂದ ಉಂಟಾಗಿರುವ ನಾಚಿಕೆಗೇಡಿನ ಪರಮಾವಧಿ ಇದಾಗಿದೆ. ಈ ಘಟನೆ ಬಿಜೆಪಿಯ ನಿಜಮುಖವನ್ನು ಬಯಲು ಮಾಡಿದೆ. ಸಂಭ್ರಮದಲ್ಲಿ ಪಾಲ್ಗೊಂಡ ಶಾಸಕರು ಮತ್ತು ಕಾರ್ಪೊರೇಟರ್‌ಗಳನ್ನು ಪಕ್ಷದಿಂದ ಉಚ್ಛಾಟಿಸಬೇಕೆಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News