ಸುರತ್ಕಲ್-ಕಾನ-ಎಂಆರ್‌ಪಿಎಲ್ ರಸ್ತೆ ದುರವಸ್ಥೆ ಖಂಡಿಸಿ ಪ್ರತಿಭಟನೆ

Update: 2018-08-09 17:48 GMT

ಮಂಗಳೂರು, ಆ.9: ಸುರತ್ಕಲ್-ಕಾನ-ಎಂಆರ್‌ಪಿಎಲ್ ರಸ್ತೆ ದುರವಸ್ಥೆ ಖಂಡಿಸಿ, ಜನಪ್ರತಿನಿಧಿಗಳ ನಿರ್ಲಕ್ಷ ಧೋರಣೆ ವಿರೋಧಿಸಿ ಡಿವೈಎಫ್‌ಐ ಸುರತ್ಕಲ್ ವಲಯ ಸಮಿತಿ ಮತ್ತು ನಾಗರಿಕ ಹೋರಾಟ ಸಮಿತಿ ಕಾನ ಹಾಗೂ ಲೋಕಲ್ ಲಾರಿ ಚಾಲಕ-ನಿರ್ವಾಹಕರ ಸಂಘ (ಸಿಐಟಿಯು) ಕಾನ ಇವುಗಳ ಜಂಟಿ ನೇತೃತ್ವದಲ್ಲಿ ಕಾನ ಜಂಕ್ಷನ್ ಬಳಿ ರಸ್ತೆ ತಡೆ ಪ್ರತಿಭಟನೆ ನಡೆಯಿತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮತ್ತು ನಾಗರಿಕ ಹೋರಾಟ ಸಮಿತಿಯ ಸಂಚಾಲಕ ಬಿ.ಕೆ. ಇಮ್ತಿಯಾಝ್, ಸುರತ್ಕಲ್ ಕಾನ ಎಂಆರ್‌ಪಿಎಲ್ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಕಳೆದ 2 ವರ್ಷಗಳಿಂದ ಸಾರ್ವಜನಿಕರ ಜೊತೆ ಸೇರಿ 17 ಪ್ರತಿಭಟನೆ ನಡೆಸಿದ ಪ್ರತಿಫಲವಾಗಿ ಕಳೆದ ವರ್ಷ 4.5 ಕಿ.ಮೀ. ಚತುಷ್ಪಥ ರಸ್ತೆಗೆ 60 ಕೋಟಿ ರೂ. ಮಂಜೂರಾಗಿ ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿ ಆರಂಭವಾಗಬೇಕಿತ್ತು. ಆದರೆ ಹಾಲಿ ಮತ್ತು ಮಾಜಿ ಶಾಸಕರ ಹಿಂಬಾಲಕರಿಗೆ ಗುತ್ತಿಗೆ ಸಿಗದಿರುವ ಕಾರಣಕ್ಕೆ ಕಾಮಗಾರಿ ಆದೇಶ ತಡೆ ಹಿಡಿದು ಜನರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ ಎಂದು ಆರೋಪಿಸಿದ್ದಾರೆ.

ಬೃಹತ್ ಕೈಗಾರಿಕೆಗಳಿಗೆ ಬರುವ ಬೃಹತ್ ಘನ ವಾಹನಗಳ ಓಡಾಟದಿಂದಾಗಿ ರಸ್ತೆ ಹೊಂಡಗುಂಡಿಗಳಿಂದ ತುಂಬಿ ಹೋಗಿದ್ದು, ಮೋಟಾರ್ ಸೈಕಲ್ ಸವಾರರು ನಿತ್ಯ ಅಪಘಾತಕ್ಕೀಡಾಗುತ್ತಿದ್ದಾರೆ. ವಾಹನಗಳು ಹಾನಿಗೊಳಗಾಗುತ್ತಿವೆ. ಧೂಳಿನಿಂದ ರಸ್ತೆ ಬದಿ ಪಾದಚಾರಿಗಳು ನಡೆದಾಡಲು ಕಷ್ಟಪಡುತ್ತಿದ್ದಾರೆ. ನಿಕೃಷ್ಟ ರಸ್ತೆಯ ಅಭಿವೃದ್ಧಿ ಮಾಡದೆ ರಾಜಕೀಯ ಮಾಡುತ್ತಿರುವುದು ಖಂಡನೀಯ ಎಂದರು.

ರಸ್ತೆ ಕಾಮಗಾರಿ ಕೂಡಲೇ ಆರಂಭಿಸದಿದ್ದರೆ ಕೈಗಾರಿಕೆಗಳಿಗೆ ವಾಹನಗಳನ್ನು ತಡೆದು ರಸ್ತೆ ಸಂಚಾರ ಬಂದ್ ಮಾಡಿ ತೀವ್ರ ರೀತಿಯ ಹೋರಾಟ ಹಮ್ಮಿಕೊಳ್ಳುವುದಾಗಿ ಇಮ್ತಿಯಾಝ್ ಎಚ್ಚರಿಸಿದರು. 

ಡಿವೈಎಫ್‌ಐ ನಗರ ಉಪಾಧ್ಯಕ್ಷ ಶ್ರೀನಾಥ್ ಕುಲಾಲ್ ಮಾತನಾಡಿದರು. ಲಾರಿ ಚಾಲಕರ ಸಂಘದ ಮುಖಂಡ ಮೊಯ್ದಿನ್ ಮಂಗಳಪೇಟೆ, ಹೋರಾಟ ಸಮಿತಿಯ ಸಹ ಸಂಚಾಲಕರಾದ ನವೀನ್ ಪೂಜಾರಿ, ಬೆನೆಡಿಕ್ಟ್ ಕ್ರಾಸ್ತ, ಜನವಾದಿ ಮಹಿಳಾ ಸಂಘಟನೆ ಮುಖಂಡೆ ಪುಷ್ಪಾವತಿ, ಡಿವೈಎಫ್‌ಐ ಮುಖಂಡರಾದ ಅಜ್ಮಲ್ ಅಹ್ಮದ್, ಉದಯ ಕಾನ, ಐ.ಮುಹಮ್ಮದ್, ಬಿ.ಕೆ ಮಕ್ಸೂದ್, ಹಂಝ ಮೈಂದಗುರಿ, ಮೆಹಬೂಬ್ ಖಾನ್, ಮುಸ್ಬ ಕೃಷ್ಣಾಪುರ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News