ಎಲೈಸಿ ಪಾಲಿಸಿಗಳ ಮೇಲಿ ಜಿಎಸ್‌ಟಿ ರದ್ದು ಪಡಿಸಿ: ಮಂಜುನಾಥ್

Update: 2018-08-10 12:09 GMT

ಉಡುಪಿ, ಆ.10: ಜನರ ಜೀವನ ಭದ್ರತೆ ಹಾಗೂ ಭವಿಷ್ಯ ಕಟ್ಟುವ ಎಲ್‌ಐಸಿ ಪ್ರೀಮಿಯಂ ಮೇಲೆ ಕೇಂದ್ರ ಸರಕಾರ ಜಿಎಸ್‌ಟಿ ವಿಧಿಸುತ್ತಿದೆ. ಇದರ ಬಗ್ಗೆ ಕೇಂದ್ರ ಸರಕಾರ ಸಂಸತ್ತಿನಲ್ಲಿ ಉತ್ತರ ಕೊಡುತ್ತಿಲ್ಲ ಹಾಗೂ ಚರ್ಚೆ ಕೂಡ ಮಾಡುತ್ತಿಲ್ಲ ಎಂದು ಅಖಿಲ ಭಾರತ ಜೀವವಿಮಾ ಪ್ರತಿನಿಧಿಗಳ ಸಂಘಟನೆ ಕೇಂದ್ರ ಕಚೇರಿಯ ಉಪಾಧ್ಯಕ್ಷ ಎಲ್.ಮಂಜುನಾಥ್ ಆರೋಪಿಸಿದ್ದಾರೆ.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ವಿಮಾ ಪ್ರತಿನಿಧಿಗಳ ಸಂಘಟನೆ(ಸಿಐಟಿಯು) ಉಡುಪಿ ವಿಭಾಗದ ವತಿಯಿಂದ ಅಜ್ಜರಕಾಡುವಿನಲ್ಲಿರುವ ಎಲ್‌ಐಸಿ ಉಡುಪಿ ವಿಭಾಗೀಯ ಕಚೇರಿ ಮುಂದೆ ಶುಕ್ರವಾರ ಹಮ್ಮಿಕೊಳ್ಳಲಾದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಎಲ್‌ಐಸಿ ಪ್ರತಿನಿಧಿಗಳಿಗೆ ಉದ್ಯೋಗ ಭದ್ರತೆ ಇಲ್ಲವಾಗಿದೆ. ಎಲ್‌ಐಸಿಯ ಪ್ರಮುಖ ಆಧಾರವಾಗಿರುವ ಪ್ರತಿನಿಧಿ ಗಳಿಗೆ ಯಾವುದೇ ಸೌಲಭ್ಯಗಳನ್ನು ಸರಕಾರ ನೀಡುತ್ತಿಲ್ಲ. ವಿದೇಶಿ ನೀತಿಯನ್ನು ಜಾರಿಗೆ ತರುವ ಮೂಲಕ ಮಾನವ ಸಂಪನ್ಮೂಲಗಳನ್ನು ವಿದೇಶಕ್ಕೆ ಒತ್ತೆ ಇಡುವ ಕಾರ್ಯವನ್ನು ಸರಕಾರ ಮಾಡುತ್ತಿದೆ ಎಂದು ಅವರು ದೂರಿದರು.

ಸಂಘಟನೆಯ ಅಖಿಲ ಭಾರತ ವಿಮಾ ಪ್ರತಿನಿಧಿಗಳ ಸಂಘಟನೆಯ ರಾಜ್ಯ ಸಮಿತಿಯ ಕಾರ್ಯಾಧ್ಯಕ್ಷ ರಮೇಶ್ ಕುಮಾರ್, ಎಲ್‌ಐಸಿ ವಿಮಾ ನೌಕರರ ಸಂಘ ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ಗುರುದತ್, ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿದರು.

ಪ್ರಮುಖ ಬೇಡಿಕೆಗಳು: ಪಾಲಿಸಿಗಳ ಮೇಲೆ ವಿಧಿಸುವ ಜಿಎಸ್‌ಟಿ ರದ್ದು ಪಡಿಸಬೇಕು. ಜೀವವಿಮಾ ಪ್ರತಿನಿಧಿಗಳಿಗೆ ಕಲ್ಯಾಣ ನಿಧಿ, ಖಾತ್ರಿ ಪಿಂಚಣಿ ಹಾಗೂ ಮೆಡಿಕ್ಲೇಮ್ ಸೌಲಭ್ಯ ಮತ್ತು ಎಲ್ಲ ಪ್ರತಿನಿಧಿಗಳಿಗೆ ಗುರುತು ಚೀಟಿ ನೀಡಬೇಕು. ವಿಮೆಯ ನೇರ ಮಾರಾಟ ನಿಲ್ಲಿಸಬೇಕು. ಗ್ರಾಚ್ಯುಟಿ ಹೆಚ್ಚಿಸಬೇಕು ಹಾಗೂ ಲೆಕ್ಕಿಸುವ ಗ್ರಾಚ್ಯುಟಿ ಕಾಯಿದೆಗೆ ತಿದ್ದುಪಡಿ ಆಗಬೇಕು. ಶಾಖೆಗಳಲ್ಲಿ ಉತ್ತಮ ಸೇವೆಯನ್ನು ಪಾಲಿಸಿ ದಾರರಿಗೆ ಮತ್ತು ಪ್ರತಿನಿಧಿಗಳಿಗೆ ನೀಡಬೇಕು. ಕ್ಲಬ್ ಸದಸ್ಯರ ಆಯ್ಕೆಯ ಸಂದರ್ಶನ ನಿಲ್ಲಿಸಬೇಕು. ಜೀವನಸರಳ್ ಹಾಗೂ ವೆಲ್ತ್‌ಪ್ಲಸ್ ಪಾಲಿಸಿಗಳ ಮೆಚ್ಯೂರಿಟಿಯಲ್ಲಿ ಉಂಟಾದ ನಷ್ಟವನ್ನು ಪಾಲಿಸಿದಾರ ರಿಗೆ ನೀಡಬೇಕು. ಎರಡು ವರ್ಷದ ಪಾಲಿಸಿ ಅವಧಿ ನಂತರವು ಲ್ಯಾಪ್ಸ್‌ಗೊಂಡ ಪಾಲಿಸಿಗಳನ್ನು ಪುನರ್‌ಜೀವಗೊಳಿಸಲು ಅವಕಾಶ ನೀಡಬೇಕು ಎಂದು ಧರಣಿ ಯಲ್ಲಿ ಒತ್ತಾಯಿಸಲಾಯಿತು.

ಧರಣಿಯಲ್ಲಿ ಸಂಘಟನೆಯ ಉಡುಪಿ ವಿಭಾಗದ ಅಧ್ಯಕ್ಷ ಎ.ಎಸ್. ಲೋಕೇಶ್ ಶೆಟ್ಟಿ, ಕಾರ್ಯದರ್ಶಿ ಶಕೀಲಾ ಅಡ್ಯಂತಾಯ, ಕೋಶಾಧಿಕಾರಿ ಎಂ. ರಘುನಾಥ ಶೆಟ್ಟಿ, ಬಂಟ್ವಾಳ ವಿಭಾಗದ ಪ್ರಧಾನ ಕಾರ್ಯದರ್ಶಿ ನವೀನ್ ಕೊಡ್ಮಾಣ್ ೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News