ಇತಿಹಾಸ ತಿರುಚಿ ಸುಬ್ರಹ್ಮಣ್ಯ ಮಠಕ್ಕೆ ಮಸಿ ಬಳಿಯುವ ಯತ್ನ: ತುಳು ಶಿವಳ್ಳಿ ಬ್ರಾಹ್ಮಣ ಮಾಧ್ವ ಮಹಾಮಂಡಲ ಆರೋಪ

Update: 2018-08-10 12:38 GMT

ಉಡುಪಿ, ಆ.10: 700 ವರ್ಷಗಳ ಇತಿಹಾಸ ಹೊಂದಿರುವ ಸುಬ್ರಹ್ಮಣ್ಯ ಮಠಕ್ಕೆ ಅನಾವಶ್ಯಕವಾಗಿ ಮಸಿ ಬಳಿಯುವ ಕಾರ್ಯ ನಡೆಯುತ್ತಿದೆ. ಇತಿಹಾಸ ತಿಳಿಯದವರು ಅನಾದಿ ಕಾಲದಿಂದಲೂ ದೇವಸ್ಥಾನ ಸರಕಾರದ ಸುಪರ್ದಿ ಯಲ್ಲೇ ಇತ್ತು, ಮಠಕ್ಕೂ ದೇವಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಇದು ಮುಂದುವರೆದಲ್ಲಿ ಉಗ್ರ ಪ್ರತಿ ಭಟನೆ ನಡೆಸಲಾಗುವುದು ಮತ್ತು ಕಾನೂನು ಹೋರಾಟಕ್ಕೂ ಸಜ್ಜಾಗುವುದು ಎಂದು ತುಳು ಶಿವಳ್ಳಿ ಬ್ರಾಹ್ಮಣ ಮಾಧ್ವ ಮಹಾಮಂಡಲ ಎಚ್ಚರಿಕೆ ನೀಡಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾ ಮಂಡಲದ ಅಧ್ಯಕ್ಷ ಅರವಿಂದ ಆಚಾರ್ಯ, ಸುಬ್ರಹ್ಮಣ್ಯ ಮಠಕ್ಕೂ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಅತ್ಯಂತ ಪ್ರಾಚೀನವಾದ ಸಂಬಂಧವಿದೆ. 1886ರವರೆಗೆ ದೇವ ಸ್ಥಾನವು ಮಠದ ಆಡಳಿತದಲ್ಲೇ ಇತ್ತು. 1950ರಲ್ಲಿ ದೇವಸ್ಥಾನವನ್ನು ಸರಕಾರ ಸುಪರ್ದಿಗೆ ತೆಗೆದುಕೊಂಡಿತು. ಕುಕ್ಕೆ ಎಂಬ ಕುಗ್ರಾಮದಲ್ಲಿ ಸುಬ್ರಹ್ಮಣ್ಯನನ್ನು ಪ್ರತಿಷ್ಠಾಪಿಸಿದವರು ಶ್ರೀಮದ್ವಾಚಾರ್ಯರು ಎಂಬುದಕ್ಕೆ ಬೇಕಾದಷ್ಟು ದಾಖಲೆ ಗಳಿವೆ ಎಂದರು.

ಮಠದ ಪ್ರಧಾನ ದೇವರು ನರಸಿಂಹ ಆಗಿದ್ದರೂ ಸುಬ್ರಹ್ಮಣ್ಯ ಮಠ ಎಂಬು ದಾಗಿ ಹೆಸರನ್ನು ಹಾಕುವ ಮೂಲಕ ದೇವಸ್ಥಾನದ ಹೆಸರನ್ನು ಬಳಸಿಕೊಂಡು ಭಕ್ತರ ದಾರಿ ತಪ್ಪಿಸಲಾಗುತ್ತಿದೆ ಎಂಬುದಾಗಿ ಕೆಲವರು ಆಕ್ಷೇಪಿಸಿದ್ದಾರೆ. ಸುಬ್ರ ಹ್ಮಣ್ಯ ಮಠ ಎಂಬುದು ಇತ್ತೀಚೆಗೆ ಬಂದಿರುವ ಹೆಸರಲ್ಲ. ಭಕ್ತರಿಂದ ಕರೆಯಲ್ಪಟ್ಟ ಹೆಸರೇ ಹೊರತು ಪ್ರಸಿದ್ಧಿಗಾಗಿ ನಾವೇ ಇಟ್ಟುಕೊಂಡ ಹೆಸರು ಅಲ್ಲ ಎಂದು ಅವರು ಹೇಳಿದರು.

ಮಠದಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಗಳನ್ನು ಅಕ್ರಮ ಎಂಬು ದಾಗಿ ಬಿಂಬಿಸಲಾಗುತ್ತಿದೆ. ಆದರೆ ಇವು ಮಠದ ಭಕ್ತರ ಅಪೇಕ್ಷೆಯಂತೆ ಶಾಸ್ತ್ರೀಯ ವಾಗಿ ನಡೆಯುತ್ತಿರುವ ಪ್ರಾಯಶ್ಚಿತಗಳು. ಇದು ಹಣದ ಆಸೆಯಿಂದ ದಲ್ಲಾಳಿಗಳಿಂದ ನಡೆಯುತ್ತಿರುವ ದಂಧೆಯಲ್ಲ. ಇಲ್ಲಿ ಎಲ್ಲವೂ ಪಾರದರ್ಶಕ ವಾಗಿಯೇ ನಡೆಯುತ್ತಿದೆ. ಆದರೂ ಆಧಾರ ಇಲ್ಲದೆ ಸುಳ್ಳು ವಿಚಾರಗಳನ್ನು ಏಕಪಕ್ಷೀಯವಾಗಿ ಮಾಧ್ಯಮಗಳಲ್ಲಿ ತೋರಿಸಲಾಗುತ್ತಿದೆ. ಇದನ್ನೆ ನೆಪವಾಗಿಟ್ಟು ಕೊಂಡು ದೇವಸ್ಥಾನದ ಆಡಳಿತ ಮಂಡಳಿಯು ಅವಮಾನಕರ ಹೇಳಿಕೆಗಳನ್ನು ಕೊಡುತ್ತಿದೆ ಎಂದು ಅವರು ದೂರಿದರು.

ವೃಥಾ ಆರೋಪಗಳನ್ನು ಮಾಡುತ್ತ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗೆ ಅವಮಾನ ಮಾಡಲಾಗುತ್ತಿದೆ. ಇತಿಹಾಸವನ್ನು ತಿರುಚಿ ಜನರಲ್ಲಿ ತಪ್ಪು ಭಾವನೆ ಯನ್ನು ಬಿತ್ತುವ ಈ ನಡೆ ಖಂಡನೀಯವಾಗಿದೆ. ಇದೆಲ್ಲವೂ ಮಠದ ಭಕ್ತರಿಗೆ ನೋವುಂಟು ಮಾಡುತ್ತಿದೆ. ಸರಳ ಸಾಧು ಸ್ವಭಾವದ ಸ್ವಾಮೀಜಿಯ ವ್ಯಕ್ತಿತ್ವ, ಗೌರವಕ್ಕೆ ಧಕ್ಕೆಯುಂಟು ಮಾಡುತ್ತಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಹಾಮಂಡಲದ ಕಾರ್ಯದರ್ಶಿ ರವಿಪ್ರಕಾಶ್ ಭಟ್, ಕೋಶಾಧಿಕಾರಿ ಉದ್ಯಾವರ ವಾದಿರಾಜ ಆಚಾರ್ಯ, ಸಂಶೋಧಕ ಆನಂದ ತೀರ್ಥ ಉಪಾಧ್ಯಾಯ, ದಾಮೋದರ್ ಐತಾಳ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News