ಕುಂದಾಪುರ: ನಾಯಿ ಸಹಿತ ಬಾವಿಗೆ ಬಿದ್ದ ಚಿರತೆಯ ರಕ್ಷಣೆ

Update: 2018-08-10 13:28 GMT

ಕುಂದಾಪುರ, ಆ.10: ಹೊಂಬಾಡಿ-ಮಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಣ್ಸೆಮಕ್ಕಿ ಸಮೀಪದ ಅಂಬಾಡಿ ಎಂಬಲ್ಲಿ ನಾಯಿಯನ್ನು ಅಟ್ಟಿಸಿ ಕೊಂಡು ಬಂದು ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆಯವರು ಶುಕ್ರವಾರ ರಕ್ಷಿಸಿದ್ದಾರೆ.

ಬೇಟೆ ಅರಸಿಕೊಂಡು ಬಂದ ಚಿರತೆಯು ಗುರುವಾರ ಮಧ್ಯರಾತ್ರಿಯ ನಂತರ ಅಂಬಾಡಿಯ ಲತಾ ಕುಲಾಲ್ತಿ ಎಂಬವರ ಮನೆಯ ನಾಯಿಯನ್ನು ಅಟ್ಟಿಸಿ ಕೊಂಡು ಹೋಗಿದ್ದು, ಈ ವೇಳೆ ಚಿರತೆ ಲತಾ ಕುಲಾಲ್ತಿ ಅವರ ಬಾವಿಗೆ ನಾಯಿ ಸಮೇತ ಬಿತ್ತೆನ್ನಲಾಗಿದೆ. ಒಂದು ಗಂಟೆಯ ಸುಮಾರಿಗೆ ಬಾವಿಯೊಳಗಿ ನಿಂದ ನಾಯಿ ಹಾಗೂ ಚಿರತೆ ಕೂಗುವ ಸದ್ದು ಕೇಳಿ ನಿದ್ದೆಯಿಂದ ಎಚ್ಚರಗೊಂಡು ಹೊರಗಡೆ ಬಂದ ಮನೆಯವರಿಗೆ ಈ ವಿಚಾರ ತಿಳಿಯಿತ್ತೆನ್ನಲಾಗಿದೆ.

ಕೂಡಲೇ ಮನೆಯವರು ಬಾವಿಯೊಳಗಿನ ರಿಂಗ್ ಮೇಲೆ ಕೂತಿದ್ದ ನಾಯಿ ಯನ್ನು ಬುಟ್ಟಿ ಇಳಿಸಿ ಮೇಲಕ್ಕೇತ್ತಿದ್ದರು. ಬಳಿಕ ಕೋಟ ಪೊಲೀಸರಿಗೆ ಹಾಗೂ ಅರಣ್ಯ ಇಲಾಖೆಗೆ ಈ ಕುರಿತು ಮಾಹಿತಿ ನೀಡಲಾಯಿತು. ನೀರಿನಲ್ಲಿ ಬಿದ್ದಿದ್ದ ಚಿರತೆ ಬಾವಿಯೊಳಗಿನ ರಿಂಗ್ ಮೇಲೆ ಆಸರೆ ಪಡೆದುಕೊಂಡಿತ್ತು. ಬೆಳಗ್ಗೆ ಬೋನಿನೊಂದಿಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು, ಪೊಲೀಸರು ಹಾಗೂ ಸ್ಥಳೀಯರ ಸಹಕಾರದೊಂದಿಗೆ ಚಿರತೆ ರಕ್ಷಣೆಯ ಕಾರ್ಯಾಚರಣೆ ನಡೆಸಿದರು.

ಬೋನನ್ನು ಹಗ್ಗ ಕಟ್ಟಿ ಬಾವಿಗೆ ಇಳಿಸಿ, ಚಿರತೆ ಬೋನಿನೊಳಗೆ ಹೋಗುವಂತೆ ಮಾಡಲಾಯಿತು. ಬೆಳಗ್ಗೆ 10.30ರ ಸುಮಾರಿಗೆ ಚಿರತೆ ಬೋನಿನೊಳಗೆ ಸೆರೆ ಯಾಯಿತು. ನಂತರ ಬೋನಿಗೆ ಬೀಗ ಹಾಕಿ ಚಿರತೆಯನ್ನು ಸುರಕ್ಷಿತವಾಗಿ ಮೇಲಕ್ಕೇತ್ತಲಾಯಿತು. ಐದು ವರ್ಷದ ಗಂಡು ಚಿರತೆ ಇದಾಗಿದ್ದು, ಸಂಜೆ ವೇಳೆ ಸುರಕ್ಷಿತವಾಗಿ ಅಭಯಾರಣ್ಯಕ್ಕೆ ಬಿಡಲಾಯಿತು ಎಂದು ಕುಂದಾಪುರ ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ ತಿಳಿಸಿದ್ದಾರೆ.

ಕುಂದಾಪುರ ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಅರಣ್ಯಾಧಿಕಾರಿ ಉದಯ, ಅರಣ್ಯ ರಕ್ಷಕರಾದ ಶಂಕರ್ ಖಾರ್ವಿ, ಶಿವಕುಮಾರ್, ಬಂಗಾರಪ್ಪ, ಅರಣ್ಯ ವೀಕ್ಷಕರಾದ ಸೋಮಪ್ಪ, ವೆಂಕಟೇಶ್, ವಾಹನ ಚಾಲಕ ಅಶೋಕ್ ಪಾಲ್ಗೊಂಡಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News